ಮರಣದಂಡನೆ, ಜೀವಾವಧಿ ಶಿಕ್ಷೆ ವಿಧಿಸಬಹುದಾದ ಪ್ರಕರಣದಲ್ಲೂ ಜಾಮೀನು ನೀಡಬಹುದು: ಹೈಕೋರ್ಟ್

Update: 2022-05-24 12:37 GMT

ಬೆಂಗಳೂರು, ಮೇ 24: ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪಿಗೂ ಸಿಆರ್‍ಪಿಸಿ ಸೆಕ್ಷನ್ 437ರ ಅನುಸಾರ ವಿಶೇಷ ಸಂದರ್ಭಗಳಲ್ಲಿ ಜಾಮೀನು ನೀಡಬಹುದು ಎಂದು ಹೈಕೋರ್ಟ್ ತೀರ್ಪು ನೀಡಿದೆ. 

ರಿಯಲ್ ಎಸ್ಟೇಟ್ ಉದ್ಯಮಿ ಪತಿಯನ್ನು ಹತ್ಯೆ ಮಾಡಿದ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರಿನ ಹಾರೋಕ್ಯಾತನಹಳ್ಳಿ ನಿವಾಸಿ ನೇತ್ರಾ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರ ಮಹಿಳೆ ನೇತ್ರಾ ವಿರುದ್ಧ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧ ಕೃತ್ಯ ಎಸಗಿದ ಆರೋಪವಿದೆ. ಇದೇ ಕಾರಣಕ್ಕೆ ಸೆಷನ್ಸ್ ಕೋರ್ಟ್ ಜಾಮೀನು ನಿರಾಕರಿಸಿದೆ. ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 437ರ ಅನುಸಾರ ಮರಣ ದಂಡನೆ/ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧದಲ್ಲಿ ಭಾಗಿಯಾಗಿರುವ ಆರೋಪಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಮಹಿಳೆಯಾಗಿದ್ದರೆ, ರೋಗಿಯಾಗಿದ್ದರೆ, ದುರ್ಬಲನಾಗಿದ್ದರೆ ಜಾಮೀನು ನೀಡಲು ಅವಕಾಶವಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೇ, ಮೃತಪಟ್ಟಿರುವ ಪತಿ ಹುಡುಗಿಯರ ಜೊತೆ ಸುತ್ತುತ್ತಿದ್ದ ಎಂಬ ಕಾರಣಕ್ಕೂ ಹಾಗೂ ಸ್ನೇಹಿತನ ಜೊತೆ ದೈಹಿಕ ಸಂಬಂಧ ಹೊಂದುವಂತೆ ಪತ್ನಿಗೆ ಹೇಳಿದ್ದನೆಂಬ ಕಾರಣಕ್ಕೂ ದಂಪತಿ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಪತಿಯ ಹತ್ಯೆಯ ಬಳಿಕ ಪೊಲೀಸರಿಗೆ ಪತ್ನಿ ಶರಣಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆರೋಪಿ ಮಹಿಳೆ ನೇತ್ರಾಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಹೀಗಾಗಿ, ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು ಎಂದು ಪೀಠ ಅಭಿಪ್ರಾಯಪಟ್ಟು, ಆರೋಪಿ ಮಹಿಳೆ ನೇತ್ರಾಗೆ ಷರತ್ತುಬದ್ಧ ಜಾಮೀನು ನೀಡಿದೆ.

ಪ್ರಕರಣವೇನು: 2021ರ ನ.7ರಂದು ಮೃತ ಪಾಲಾರ್ ಸ್ವಾಮಿಯ ತಂದೆ ತಮ್ಮ ಸೊಸೆ ನೇತ್ರಾ ವಿರುದ್ಧ ಮಾದನಾಯಕನಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ತಮ್ಮ ಪುತ್ರ ಪಾಲಾರ್ ಸ್ವಾಮಿಯನ್ನು ಸೊಸೆ ನೇತ್ರಾ 2021ರ ನ.6ರಂದು ಕೊಲೆ ಮಾಡಿದ್ದಾರೆ. ಇದಕ್ಕೆ ಸಂಬಂಧಿ ವಿಜಯ್ ಎಂಬುವರೂ ಸಹಕಾರ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. 

ದೂರಿನ ಮೇರೆಗೆ ಐಪಿಸಿ ಸೆಕ್ಷನ್ 302, 120ಬಿ ಹಾಗೂ 34ರ ಅಡಿ ಎಫ್‍ಐಆರ್ ದಾಖಲಿಸಿದ್ದ ಪೊಲೀಸರು, ಆರೋಪಿ ನೇತ್ರಾರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಜಾಮೀನು ಕೋರಿ ನೇತ್ರಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಆರೋಪಿ ವಿರುದ್ಧ ಜೀವಾವಧಿ ಅಥವಾ ಮರಣ ದಂಡನೆ ಶಿಕ್ಷೆ ವಿಧಿಸಬಹುದಾದ ಅಪರಾಧ ಕೃತ್ಯದ ಆರೋಪವಿದೆ ಎಂಬ ಕಾರಣಕ್ಕೆ ಜಾಮೀನು ನಿರಾಕರಿಸಿತ್ತು. ಈ ಆದೇಶ ಪ್ರಶ್ನಿಸಿ ನೇತ್ರಾ ಹೈಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News