ಪಿಎಸ್‍ಐ ನೇಮಕಾತಿ ಹಗರಣ: ಹೈಕೋರ್ಟ್‍ನಲ್ಲಿ ಬುಧವಾರ ಅರ್ಜಿ ವಿಚಾರಣೆ
Update: 2022-05-24 18:59 IST
ಬೆಂಗಳೂರು, ಮೇ 24: ಪಿಎಸ್‍ಐ ನೇಮಕಾತಿ ಅಕ್ರಮ ಹಗರಣದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‍ಐಆರ್ ರದ್ದುಪಡಿಸುವಂತೆ ಕೋರಿ ಆರೋಪಿಗಳಾದ ಜಾಗೃತ್ ಮತ್ತು ರಚನಾ ಹನುಮಂತ ಸಲ್ಲಿಸಿದ್ದ ರಿಟ್ ಅರ್ಜಿ ಹೈಕೋರ್ಟ್‍ನಲ್ಲಿ ಬುಧವಾರ ವಿಚಾರಣೆಗೆ ಬರಲಿದೆ.
545 ಪಿಎಸ್‍ಐ ಹುದ್ದೆಗಳ ನೇಮಕಾತಿ ಅಕ್ರಮ ಹಗರಣದಲ್ಲಿ ಪಾಲ್ಗೊಂಡ ಆರೋಪ ಸಂಬಂಧ ಸಿಐಡಿ ಪೊಲೀಸ್ ಅಧಿಕಾರಿ ಪಿ.ನರಸಿಂಹಮೂರ್ತಿ ಎಂಬುವರು ನೀಡಿದ ದೂರು ಆಧರಿಸಿ ಹೈಗ್ರೌಂಡ್ಸ್ ಠಾಣಾ ಪೊಲೀಸರು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನಾಲ್ಕನೆ ರ್ಯಾಂಕ್ ಪಡೆದಿರುವ ಜಾಗೃತ್ ವಿರುದ್ಧ 2022ರ ಎ.9ರಂದು ಎಫ್‍ಐಆರ್ ದಾಖಲಿಸಿದ್ದರು. ಅದೇ ರೀತಿಯಲ್ಲಿ ಮಹಿಳಾ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದಿರುವ ರಚನಾ ಹನುಮಂತ ವಿರುದ್ಧ ಎ.30ರಂದು ಎಫ್‍ಐಆರ್ ದಾಖಲಿಸಿದ್ದರು.
ಈ ಎಫ್‍ಐಆರ್ ರದ್ದು ಕೋರಿ ಜಾಗೃತ್ ಮತ್ತು ರಚನಾ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಮೇ 25ರಂದು ವಿಚಾರಣೆಗೆ ಬರಲಿದೆ.