ವಿಧಾನ ಪರಿಷತ್ ಚುನಾವಣೆ: ಅದೃಷ್ಟದ ಅಂಬಾಸಿಡರ್ ಕಾರಿನಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ ಬಸವರಾಜ ಹೊರಟ್ಟಿ

Update: 2022-05-24 15:39 GMT

ಬೆಂಗಳೂರು, ಮೇ 24: ‘ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯ ಅಭ್ಯರ್ಥಿಯಾಗಿರುವ ನಿಕಟಪೂರ್ವ ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಹಳೆಯ ಮತ್ತು ಅದೃಷ್ಟದ ಕಾರಿನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಮಂಗಳವಾರ ಬೆಳಗ್ಗೆ ಪತ್ನಿ ಹೇಮಲತಾ ಅವರೊಂದಿಗೆ ತಮ್ಮ ಅದೃಷ್ಟದ ‘ಸಿಎನ್‍ಬಿ-5757’ ನೋಂದಣಿ ಸಂಖ್ಯೆ ಅಂಬಾಸಿಡರ್ ಕಾರಿನಲ್ಲೇ ತೆರಳಿ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಬಸವರಾಜ ಹೊರಟ್ಟಿ ಅವರು ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ... ಹೆಲಿಕಾಪ್ಟರ್‌ನಲ್ಲಿ ಬಂದು ನಾಮಪತ್ರ ಸಲ್ಲಿಸಿದ ಹೇಮಲತಾ ನಾಯಕ್ 

ಬಳಿಕ ಮಾತನಾಡಿದ ಬಸವರಾಜ ಹೊರಟ್ಟಿ, ‘ದ್ವಿಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಮೇ 26ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಬಂದು ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸುತ್ತೇನೆ. ಶಿಕ್ಷಕರ ಕ್ಷೇತ್ರದಿಂದ ಏಳು ಬಾರಿ ಯಾರೂ ಆಯ್ಕೆಯಾಗಿಲ್ಲ. ನಾನು ಎಂಟನೆ ಬಾರಿ ಆಯ್ಕೆಯಾದರೆ ದಾಖಲೆಯಾಗಲಿದ್ದು, ಎಲ್ಲರೂ ಮೇಲೆ ಒಲವು ಹೊಂದಿದ್ದಾರೆ' ಎಂದು ಭರವಸೆ ವ್ಯಕ್ತಪಡಿಸಿದರು.

ಬೆಂಬಲ: ನಾಮಪತ್ರ ಸಲ್ಲಿಸಿದ ನಂತರ ಹೊರಟ್ಟಿಯವರು ಧಾರವಾಡ ನಗರದ ಬಾಸೆಲ್ ಮಿಶನ್ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆಗಳೊಂದಿಗೆ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸರಕಾರಿ ಪ್ರೌಢಶಾಲೆ ಮದಾರಮಡ್ಡಿ, ಆರ್‍ಎಲ್‍ಎಸ್ ಶಿಕ್ಷಣ ಸಂಸ್ಥೆಗಳು ಹಾಗೂ ಕೆ.ಇ.ಬೋಡ್ರ್ಸನ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಜತೆ ಸಭೆ ನಡೆಸಿ ಮತಯಾಚನೆ ಮಾಡಿದರು.

ಈ ವೇಳೆ ಮಾತನಾಡಿದ ಹೊರಟ್ಟಿ, ತಾವು ಸಚಿವರಾಗಿದ್ದಾಗ 30ಕ್ಕೂ ಹೆಚ್ಚು ಸರಕಾರಿ ಆದೇಶಗಳನ್ನು ಹೊರಡಿಸುವದರ ಮೂಲಕ ಶಿಕ್ಷಣ ರಂಗದ ಬಹುತೇಕ ಸಮಸ್ಯೆಗಳನ್ನು ಪರಿಹರಿಸಿದ್ದು, ಬಾಕಿ ಇರುವ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲು 8ನೆ ಬಾರಿಗೆ ಶಿಕ್ಷಕರ ಒತ್ತಾಸೆಯಂತೆ ಚುನಾವಣೆಗೆ ಸ್ಪರ್ಧಿಸಿದ್ದು, ಎಲ್ಲ ಶಿಕ್ಷಕರು ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಆಯ್ಕೆ ಮಾಡಬೇಕು ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News