ಟಿಪ್ಪು ಹೆಸರಿಲ್ಲದೆ 'ಅಮೃತ ಭಾರತಿಗೆ ಕನ್ನಡದಾರತಿ' ಅಭಿಯಾನ?

Update: 2022-05-24 17:16 GMT

ಬೆಂಗಳೂರು, ಮೇ 24: ಅಮೃತ ಮಹೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಮೇ.28 ರಂದು ಹಮ್ಮಿಕೊಂಡಿರುವ ರಾಜ್ಯದ 75 ಕಡೆಗಳಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದಲ್ಲಿ  ಟಿಪ್ಪು ಸುಲ್ತಾನ್ ಅವರ ಹೆಸರನ್ನು ಕೈಬಿಡಲಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.

ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ , ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನಕ್ಕೆ ಸಂಬಂಧಿಸಿದ  ‘ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕ’ (ತ್ಯಾಗ ಬಲಿದಾನಗಳ ಕಥಾನಕ) ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ ಟಿಪ್ಪು ಸುಲ್ತಾನ್ ಹೋರಾಟದ ಕುರಿತು ಉಲ್ಲೇಖ ಮಾಡದಿರುವುದೇ ಅನುಮಾನಕ್ಕೆ ಎಡೆಮಾಡಿದೆ.

30 ನಿಮಿಷದ ಈ ಸಾಕ್ಷ್ಯಚಿತ್ರದಲ್ಲಿ ರಾಣಿ ಅಬ್ಬಕ್ಕ, ದೋಂಡಿಯಾ ವಾಘ್, ಹಲಗಲಿ ಬೇಡರು, ವೆಂಕಟಪ್ಪನಾಯ್ಕ, ಗೇರುಸೊಪ್ಪೆಯ ರಾಣಿ ಚನ್ನಬೈರಾದೇವಿ, ಸೋಂದೆಯ ರಾಜರು, ಸುರಪುರ ಹೋರಾಟ, ಬೀದರಿನ ಗೋರಟಾ ಕುರಿತು ಉಲ್ಲೇಖಿಸಲಾಗಿದೆ.

ಅದೇ ರೀತಿ, ಗಾಂಧೀಜಿ ರಾಜ್ಯದಲ್ಲಿ ನಡೆಸಿದ ಪ್ರವಾಸದ ಕುರಿತು ಚಿತ್ರದಲ್ಲಿ ವಿವರಿಸಲಾಗಿದೆ. ಆದರೆ, ಟಿಪ್ಪು ಹೆಸರು ಮಾತ್ರ ಉಲ್ಲೇಖಿಸಿಲ್ಲ. ಒಂದು ಕಡೆ ಬಂದುಹೋಗುತ್ತದೆ. ಆದರೆ, ಅದನ್ನು ನಕಾರಾತ್ಮಕವಾಗಿ ಬಿಂಬಿಸಲಾಗಿದೆ. ದೋಂಡಿಯಾ ವಾಘ್ ಕುರಿತು ಹೇಳುವಾಗ ಟಿಪ್ಪು ಹೆಸರು ಉಲ್ಲೇಖವಾಗುತ್ತದೆ.

ಅಷ್ಟೇ ಅಲ್ಲದೆ, ದೋಂಡಿಯಾ ವಾಘ್‌ನನ್ನು ಟಿಪ್ಪು ಸೆರೆಮನೆಯಲ್ಲಿ ಇರಿಸಿದ್ದರ ಬಗ್ಗೆಯಷ್ಟೇ ಹೇಳಲಾಗುತ್ತದೆ. ‘ಒಂದು ವೇಳೆ ದೋಂಡಿಯಾ ವಾಘ್ನನ್ನು ಟಿಪ್ಪು ತನ್ನ ಸೆರೆಮನೆಯಲ್ಲಿ ಇರಿಸದೆ ಇದ್ದಿದ್ದರೆ, ಬ್ರಿಟಿಷರ ವಿರುದ್ಧ ಹೋರಾಟ ಇನ್ನಷ್ಟು ತೀವ್ರಗೊಳ್ಳುತ್ತಿತ್ತು ಎಂಬುದಕ್ಕಷ್ಟೇ ಟಿಪ್ಪು ಹೆಸರು ಉಲ್ಲೇಖವಾಗುತ್ತದೆ. 

ಮತ್ತೊಂದೆಡೆ, ಇನ್ನು ಆಂಗ್ಲೋ ಮೈಸೂರು ಯುದ್ಧದ ಬಗೆಗಿನ ಮಾಹಿತಿಯನ್ನು ಈ ಚಿತ್ರ ನೀಡುವುದಿಲ್ಲ ಎನ್ನುವುದು ಗಮನಾರ್ಹ. ಇನ್ನೂ, 75 ಸ್ಥಳಗಳಲ್ಲಿ ಮೈಸೂರಿನ ಶ್ರೀರಂಗಪಟ್ಟಣ ಕೈಬಿಟ್ಟು, ರಾಮಸ್ವಾಮಿ ವೃತ್ತ, ಸುಬ್ಬರಾಯನಕೆರೆ, ಬದನವಾಳು ತಗಡೂರು ಮಾತ್ರ ಉಲ್ಲೇಖಿಸಲಾಗಿದೆ.

*ಈ ಕುರಿತು 'ವಾರ್ತಾಭಾರತಿ' ಪತ್ರಿಕೆಗೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೋಡಲ್ ಅಧಿಕಾರಿ ಸುದರ್ಶನ್, ಸಮಿತಿ ಸೂಚಿಸಿದ 75 ಪುಸ್ತಕಗಳ ಆಧಾರದ ಮೇಲೆ 75 ಸ್ಥಳಗಳಲ್ಲಿ ಈ ಅಭಿಯಾನ ಕೈಗೊಳ್ಳಲಾಗಿದೆ.ಆದರೆ, ಟಿಪ್ಪು ಸುಲ್ತಾನ್ ಹೆಸರು ಕೈಬಿಟ್ಟಿರುವ ಕುರಿತು ಹೆಚ್ಚಿನ ಮಾಹಿತಿ ಇಲ್ಲ ಎಂದರು.

ಸಾಕ್ಷ್ಯಚಿತ್ರಕ್ಕೆ ನಮಗೆ ಸಮಯದ ಅಭಾವ ಇತ್ತು. ನಿರ್ದಿಷ್ಟ ಸಮಯದಲ್ಲಿ ಎಲ್ಲವನ್ನೂ ಹೇಳುವುದು ಕಷ್ಟ. ಜತೆಗೆ ಮೈಸೂರು ಚಳವಳಿ, ಸಂಗೊಳ್ಳಿ ರಾಯಣ್ಣನವರ ಹೋರಾಟ ಸೇರಿದಂತೆ ಅನೇಕ ವಿಷಯಗಳಿವೆ. ಹಾಗಾಗಿ, ಮುಂದಿನ ದಿನಗಳಲ್ಲಿ ಸಾಕ್ಷ್ಯಚಿತ್ರ ವಿಸ್ತೃತವಾಗಿ ತಯಾರಿಸಲು ಅವಕಾಶ ಸಿಕ್ಕರೆ, ಆಗ ಈ ಎಲ್ಲ ಸಂಗತಿಗಳೂ ಬರಲಿವೆ ಎಂದೂ ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News