ಬಸ್ ನಿಲ್ದಾಣದಲ್ಲಿ ಯುವಕನ ಕೈಗೆ ಮಗು ಕೊಟ್ಟು ನಾಪತ್ತೆಯಾಗಿದ್ದ ಪ್ರಕರಣಕ್ಕೆ ತಿರುವು: ಇಬ್ಬರ ಬಂಧನ

Update: 2022-05-24 17:11 GMT

ಮೈಸೂರು,ಮೇ.24: ರಾಯಚೂರು ಬಸ್ ನಿಲ್ದಾಣದಲ್ಲಿ ಮಗುವನ್ನು ಹಿಡಿದುಕೊಂಡಿರಿ ಬರುತ್ತೇನೆ ಎಂದು ಹೇಳಿ ಹೋದ ಮಹಿಳೆ ಬಾರದ್ದರಿಂದ ಮಗುವನ್ನು ಮೈಸೂರಿಗೆ ತಂದು ಪೊಲೀಸರಿಗೆ ಒಪ್ಪಿಸಿದ್ದ ವ್ಯಕ್ತಿಯ ನಾಟಕ ಬಯಲಾಗಿದ್ದು, ಪ್ರಿಯಕರನಿಗಾಗಿ ಹೆತ್ತ ಮಗುವನ್ನೇ ಅನಾಥ ಮಗು ಎಂದು ಹೇಳಿದ್ದ ಮಗುವಿನ ತಾಯಿ ಮತ್ತು ಆಕೆಯ ಪ್ರಿಯಕರ ಇಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.

ರಾಯಚೂರಿನ 23 ವರ್ಷದ ಯುವತಿಗೂ ಮೈಸೂರು ಜಿಲ್ಲೆ ಎಚ್.ಡಿ.ಕೋಟೆಯ ನಿವಾಸಿ ರಘು(23) ಎಂಬಾತನಿಗೂ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಇಬ್ಬರೂ ವಿವಾಹವಾಗಲು ನಿರ್ಧರಿಸಿದರು.

ಮಹಿಳೆಗೆ 9 ತಿಂಗಳ ಮಗುವಿದ್ದು, ಆ ಮಗುವನ್ನು ಜತೆಯಲ್ಲಿರಿಸಿಕೊಂಡು ಸಂಸಾರ ನಡೆಸುವುದು ಕಷ್ಟ ಎಂದ  ರಘು ಹೇಳಿದ್ದಾನೆ. ಹೀಗಾಗಿ ಮಗುವನ್ನೇ ಬಿಡಲು ಮಹಿಳೆ ನಿರ್ಧರಿಸಿದಳು. ಆಕೆ ಹಾಗೂ ಮಗುವನ್ನು ರಾಯಚೂರಿನಿಂದ ಮೇ.10ರಂದು ಕರೆದುಕೊಂಡು ನಗರಕ್ಕೆ ಬಂದಿದ್ದಾನೆ. ಮಗುವಿನೊಂದಿಗೆ ಇಲ್ಲಿನ ಲಷ್ಕರ್ ಪೊಲೀಸ್ ಠಾಣೆಗೆ ತೆರಳಿ  ''ರಾಯಚೂರಿನ ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯೊಬ್ಬರು ನನಗೆ ಮಗು ನೀಡಿ ಹೊರಟು ಹೋದರು. ಎಷ್ಟೆ ಹುಡುಕಾಡಿದರು ಆಕೆ ಸಿಗಲಿಲ್ಲ. ಅನಿವಾರ್ಯವಾಗಿ ಇಲ್ಲಿಗೆ ತಂದಿದ್ದೇನೆ'' ಎಂದು ಹೇಳಿ ಪೊಲೀಸರಿಗೆ ಆ ಮಗುವನ್ನು ಒಪ್ಪಿಸಿದ್ದಾನೆ.

ಬಳಿಕ ಪೊಲೀಸರು ತನಿಖೆ ಕೈಗೊಂಡು ರಾಯಚೂರಿನಲ್ಲಿ ಜಾಲಾಡಿದ್ದಾರೆ. 'ಅತ್ತ ಪತ್ನಿ ಮತ್ತು ಮಗು ಕಾಣೆಯಾಗಿದ್ದಾರೆ ಎಂದು ಮಹಿಳೆಯ ಪತಿ ದೂರು ನೀಡಿರುವ ಮಾಹಿತಿ ಲಭಿಸಿದೆ. ಪತಿಯನ್ನು ವಿಚಾರಿಸಿದಾಗ ಮಗು ಅವರದ್ದೇ ಎಂದು ಗೊತ್ತಾಯಿತು. ಬಳಿಕ ಯುವಕ ಹಾಗೂ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬಯಲಾಯಿತು' ಎಂದು ಪೊಲೀಸರು ವಿವರಿಸಿದ್ದಾರೆ.

ಸದ್ಯ ಮಹಿಳೆ ಹಾಗೂ ಆಕೆಯ ಪ್ರಿಯಕರ ರಘು ವಿರುದ್ಧ ಐಪಿಸಿ ಸೆಕ್ಷನ್ 317 (12 ವರ್ಷದೊಳಗಿನ ಮಕ್ಕಳನ್ನು ಅನಾಥರಾಗಿಸುವುದು) ಹಾಗೂ 120ಬಿ (ಕ್ರಿಮಿನಲ್ ಪಿತೂರಿ) ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News