×
Ad

ಟಿಪ್ಪು ಸುಲ್ತಾನ್ ದೇವಾಲಯಗಳಿಗೆ ದಾನ ಮಾಡಿದ್ದ ಭೂಮಿಯನ್ನು ಆ ಸಮಾಜ ಕೇಳಿದರೆ ಬಿಟ್ಟುಕೊಡುತ್ತೀರಾ ?: ಕುಮಾರಸ್ವಾಮಿ

Update: 2022-05-25 12:30 IST

ಮೈಸೂರು, ಮೇ 25: ಟಿಪ್ಪು ಸುಲ್ತಾನ್ ಹಲವು ಹಿಂದೂ ದೇವಾಲಯಗಳಿಗೆ ಭೂಮಿ ದಾನ ಮಾಡಿದ್ದ. ಆ ಸಮಾಜ ಬಂದು ಕೇಳಿದರೆ ನೀವು ಬಿಟ್ಟುಕೊಡುತ್ತೀರ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ನಗರದ ಮಂಡಕಳ್ಳಿ ವಿಮಾನ‌ ನಿಲ್ದಾಣದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀರಂಗಪಟ್ಟಣದ ಜಾಮಿಯ ಮಸೀದಿ ಬಗ್ಗೆ ಕೆಲವರು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ದೇವರು ಕನಸಿನಲ್ಲಿ ಬಂದು ನನ್ನ ಮೂಲಸ್ಥಾನ ಇಲ್ಲಿದೆ ಎಂದು ಹೇಳಿದ್ದನಾ? ಅದನ್ನು ಸರಿಪಡಿಸಿ ಅಂತ ಕೇಳಿದ್ನಾ? ಇವೆಲ್ಲಾ ಘಟನೆಗಳನ್ನು ನೋಡಿದರೆ ಮತ್ತೊಂದು ವಿವಾದ ಶುರು ಮಾಡೊ ಲಕ್ಷಣಗಳು ಗೋಚರಿಸುತ್ತಿದೆ ಎಂದು ಕಿಡಿಕಾರಿದರು.

ಟಿಪ್ಪು ಕಾಲದಲ್ಲಿ ಹಲವು ಹಿಂದೂ ದೇವಾಲಯಗಳಿಗೆ ಭೂಮಿ ದಾನ ಮಾಡಿದ್ದಾನೆ. ಇದು ಆ ಸಮಾಜಕ್ಕೆ ಕನಸ್ಸಿಗೆ ಬರುತ್ತೆ. ಆವಾಗ ಆ ಸಮಾಜಕ್ಕೆ ಭೂಮಿ ಬಿಟ್ಟುಕೊಡುತ್ತೀರ? ಇಂಥದೆಲ್ಲವನ್ನು ಬಿಟ್ಟು ಜನರ ಬದುಕನ್ನ ನೋಡಿ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಮಂಗಳೂರಿನಲ್ಲಿ ಮಸೀದಿ ವಿಚಾರವಾಗಿ ಹಿಂದುತ್ವ ಸಂಘಟನೆಗಳು ನಡೆಸಿದ ತಾಂಬೂಲ ಪ್ರಶ್ನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ತಾಂಬೂಲ ಪ್ರಶ್ನೆಗಿಂತ ಎಲ್ಲಾ ತೀರ್ಮಾನ ಆಗುವುದು ಕೇಶವಕೃಪಾದಲ್ಲಿ. ಅಲ್ಲಿಂದ ಬರುವ ಸಂದೇಶಗಳನ್ನು ಇವರು ಪಾಲಿಸುತ್ತಾರೆ. ಈ ರೀತಿಯ ವಾತಾವರಣದಿಂದ ದೇಶಕ್ಕೆ ಮುಂದೆ ಉತ್ತಮ ಭವಿಷ್ಯ ಇಲ್ಲ, ಇನ್ನೂ ಒಂದು ವರ್ಷ ಈ ತರದ ಬರವಣಿಗೆಗಳು ನಡೆಯತ್ತಿರುತ್ತವೆ ಎಂದು ಆತಂಕ‌ ವ್ಯಕ್ತಪಡಿಸಿದರು.

ಬಿ‌.ಎಸ್.ಯಡಿಯೂರಪ್ಪ ಪುತ್ರನಿಗೆ ಪರಿಷತ್ ಟಿಕೆಟ್ ಕೈತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕುಮಾರಸ್ವಾಮಿ, ಯಾವುದೇ ತತ್ವದ ಕಥೆ ಹೇಳಿ ಟಿಕೆಟ್ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಇದು ಬಿಜೆಪಿಗೆ ತಿರುಗುಬಾಣವಾಗುವ ಲಕ್ಷಣಗಳು ಕಾಣುತ್ತಿವೆ. ಇದರಿಂದ ಬೇರೆ ಪಕ್ಷಕ್ಕೆ ಲಾಭ ನಷ್ಟದ ಪ್ರಶ್ನೆ ಇಲ್ಲ. ಆದರೆ ಸರ್ಕಾರದ ಮೇಲೆ  ಇದು ಗಂಭಿರ ಪರಿಣಾಮ ಬೀರಲಿದೆ. ಆಡಳಿತದ ಮೇಲು ಕೆಟ್ಟ ಪರಿಣಾಮ ಬೀರುವ ಲಕ್ಷಣ ಕಾಣುತ್ತಿದೆ. ಬಿಜೆಪಿಯಲ್ಲಿ ಗುಂಪುಗಾರಿಕೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News