×
Ad

ನೀತಿ ಸಂಹಿತೆ ಉಲ್ಲಂಘನೆ: ಸಚಿವ ಅಶ್ವತ್ಥನಾರಾಯಣ ವಿರುದ್ಧ ಮಂಡ್ಯ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ ಜಿಪಂ ಸಿಇಒ

Update: 2022-05-25 15:04 IST

ಮಂಡ್ಯ, ಮೇ 25: ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಸಂಬಂಧಿಸಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಮುಂದಿನ ಕ್ರಮಕ್ಕಾಗಿ ವಿಚಾರಣೆ ವೇಳೆ ಲಭ್ಯವಾದ ದಾಖಲೆಗಳ ಸಹಿತ ವರದಿಯನ್ನು ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೂ ಆಗಿರುವ ಮಂಡ್ಯ ಜಿಲ್ಲಾ ಮಟ್ಟದ ಮಾದರಿ ನೀತಿ ಸಂಹಿತೆ ತಂಡದ ಮುಖ್ಯಸ್ಥರು ಮಂಡ್ಯ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.

ಮೇ 12ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಮೇ 16ರಂದು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಂಡ್ಯ ನಗರದ ಮಿಮ್ಸ್, ಮಹಿಳಾ ಸರಕಾರಿ, ಕಾಲೇಜು, ಮಾಂಡವ್ಯ ಸಮೂಹ ಸಂಸ್ಥೆ ಹಾಗೂ ಪಿ.ಇ.ಎಸ್. ಕಾಲೇಜುಗಳಿಗೆ ಭೇಟಿ ನೀಡಿ, ಕಾಲೇಜುಗಳಲ್ಲಿ ಸಭೆಗಳನ್ನು ಆಯೋಜಿಸುವುದರ ಮೂಲಕ ಬಿಜೆಪಿ ಅಭ್ಯರ್ಥಿ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಮತದಾರರ ಮೇಲೆ ಪ್ರಭಾವ ಬೀರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದು, ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ  ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದ ಮಂಡ್ಯ ಜಿಲ್ಲಾ ಮಟ್ಟದ ಮಾದರಿ ನೀತಿ ಸಂಹಿತೆ ತಂಡದ ಮುಖ್ಯಸ್ಥರು ಮಂಡ್ಯ ನಗರದ ಮಿಮ್ಸ್ ಮಹಿಳಾ ಸರ್ಕಾರಿ ಕಾಲೇಜು, ಮಾಂಡವ್ಯ ಸಮೂಹ ಸಂಸ್ಥೆ ಹಾಗೂ ಪಿ.ಇ.ಎಸ್. ಕಾಲೇಜುಗಳಿಗೆ ಭೇಟಿ ನೀಡಿ, ಹೇಳಿಕೆ ಹಾಗೂ ವರದಿಯನ್ನು ಪಡೆದಿದ್ದಾರೆ.

ಇದೇ ವೇಳೆ ಉನ್ನತ ಶಿಕ್ಷಣ ಸಚಿವರಾದ ಡಾ||ಸಿ.ಎನ್.ಅಶ್ವತ್ಥನಾರಾಯಣರ ಕಚೇರಿಯಿಂದ ಮೇ 15ರಂದು ಹೊರಡಿಸಲಾಗಿದ್ದ ತಾತ್ಕಾಲಿಕ ಪ್ರವಾಸ ಕಾರ್ಯಕ್ರಮ ಪಟ್ಟಿಯಲ್ಲಿ ಚುನಾವಣೆ ಸಂಬಂಧಿತ ಕಾರ್ಯಕ್ರಮಗಳನ್ನು ಸೇರ್ಪಡೆ ಮಾಡಿರುವುದು ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಳಸಿ ಚುನಾವಣೆ ಪ್ರಚಾರ ಮಾಡಿರುವುದು ತಿಳಿದು ಬಂದಿದ್ದು, ಇದು ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಈ ವಿಷಯವನ್ನು ತಮ್ಮ ಅವಗಾಹನೆಗೆ ಹಾಗೂ ಮುಂದಿನ ಕ್ರಮಕ್ಕಾಗಿ ಸಲ್ಲಿಸುತ್ತಾ, ಸಂಬಂಧಪಟ್ಟ ಉಲ್ಲೇಖಿತ ಪತ್ರಗಳನ್ನು ಲಗತ್ತಿಸಿದೆ ಎಂದು ಮಂಡ್ಯ ಜಿಲ್ಲಾಧಿಕಾರಿಗೆ ಸಲ್ಲಿಸಿದ ವರದಿಯಲ್ಲಿ ಮಂಡ್ಯ ಜಿಪಂ ಸಿಇಒ ಆಗಿರುವ ಮಂಡ್ಯ ಜಿಲ್ಲಾ ಮಟ್ಟದ ಮಾದರಿ ನೀತಿ ಸಂಹಿತೆ ತಂಡದ ಮುಖ್ಯಸ್ಥರು ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News