ಭಯೋತ್ಪಾದನೆಗೆ ನಿಧಿ ಸಂಗ್ರಹ ಪ್ರಕರಣ: ಕಾಶ್ಮೀರಿ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ

Update: 2022-05-25 16:33 GMT

ಹೊಸದಿಲ್ಲಿ,ಮೇ 25:  ದಿಲ್ಲಿ ವಿಶೇಷ ಎನ್ಐಎ ನ್ಯಾಯಾಲಯವು ಬುಧವಾರ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಹಾಗೂ ನಿಷೇಧಿತ ಜೆಕೆಎಲ್ಎಫ್ ಸಂಘಟನೆಯ ಮುಖ್ಯಸ್ಥ ಯಾಸಿನ್ ಮಲಿಕ್ ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

 ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಯ ಕಲಂ 16 (ಭಯೋತ್ಪಾದಕ ಕೃತ್ಯ), 17(ಭಯೋತ್ಪಾದನೆಗೆ ಹಣಕಾಸು ಸಂಗ್ರಹ), 18 (ಭಯೋತ್ಪಾದಕ ಕೃತ್ಯಕ್ಕೆ ಸಂಚು) ಮತ್ತು 20 (ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿರುವುದು) ಹಾಗೂ ಐಪಿಸಿಯ 120-ಬಿ (ಕ್ರಿಮಿನಲ್ ಒಳಸಂಚು) ಮತ್ತು 124-ಎ (ದೇಶದ್ರೋಹ) ಕಲಮ್ ಗಳಡಿ ಮಲಿಕ್ ವಿರುದ್ಧ ಆರೋಪಗಳನ್ನು ಹೊರಿಸಲಾಗಿದ್ದು, ಅವುಗಳನ್ನು ತಾನು ವಿರೋಧಿಸುವುದಿಲ್ಲ ಎಂದು ಮಲಿಕ್ ಮೇ 10 ರಂದು ನ್ಯಾಯಾಲಯಕ್ಕೆ ತಿಳಿಸಿದ್ದ.

 ಕಾಶ್ಮೀರಿ ಪಂಡಿತರ ವಲಸೆಗೆ ಮಲಿಕ್ ಹೊಣೆಗಾರನಾಗಿದ್ದ ಎಂದು ಎನ್ಎಐ ವಿಚಾರಣೆ ಸಂದರ್ಭದಲ್ಲಿ ವಿಶೇಷ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರಿಗೆ ತಿಳಿಸಿತ್ತು. ಶಿಕ್ಷೆಯ ಕುರಿತಂತೆ ಮಲಿಕ್, ತಾನು ದಯಾಯಾಚನೆಯನ್ನು ಮಾಡುವುದಿಲ್ಲ ಮತ್ತು ನ್ಯಾಯಾಲಯವು ತನ್ನ ವಿವೇಚನೆಯಂತೆ ನಿರ್ಧರಿಸಬಹುದು ಎಂದು ತಿಳಿಸಿರುವುದಾಗಿ ನ್ಯಾಯಾಲಯದ ಮೂಲಗಳು ತಿಳಿಸಿದ್ದವು.ಮಲಿಕ್ ಗೆ ನೆರವಾಗಲು ನ್ಯಾಯಾಲಯದಿಂದ ನೇಮಕಗೊಂಡಿದ್ದ ಅಮಿಕಸ್ ಕ್ಯೂರೆ ಕನಿಷ್ಠ ಶಿಕ್ಷೆಯನ್ನು ವಿಧಿಸುವಂತೆ ಕೋರಿಕೊಂಡರು.

ಈ ನಡುವೆ, ಕಳೆದ 28 ವರ್ಷಗಳಲ್ಲಿ ತಾನು ಯಾವುದೇ ಭಯೋತ್ಪಾದಕ ಚಟುವಟಿಕೆ ಅಥವಾ ಹಿಂಸೆಯಲ್ಲಿ ಪಾಲ್ಗೊಂಡಿದ್ದನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ಸಾಬೀತುಗೊಳಿಸಿದರೆ ತಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಮತ್ತು ನೇಣುಶಿಕ್ಷೆಯನ್ನು ಒಪ್ಪಿಕೊಳ್ಳುತ್ತೇನೆ ಎಂದು ಮಲಿಕ್ ಹೇಳಿದ್ದ.

 ಆದರೆ ನ್ಯಾಯಾಧೀಶರು, ಈಗಾಗಲೇ ದೋಷಿ ಎಂದು ನಿರ್ಧಾರವಾಗಿರುವುದರಿಂದ ಪ್ರಕರಣದ ಅಂಶಗಳ ಬಗ್ಗೆ ವಾದಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಮತ್ತು ಈಗಾಗಲೇ ಆರೋಪಿಗೆ ಅದಕ್ಕಾಗಿ ಅವಕಾಶ ನೀಡಲಾಗಿತ್ತು ಎಂದು ಪ್ರತಿಕ್ರಿಯಿಸಿದರು. ನ್ಯಾಯಾಲಯವು ಮೇ 19ರಂದು ಮಲಿಕ್ ನನ್ನು ದೋಷಿ ಎಂದು ಘೋಷಿಸಿತ್ತು ಮತ್ತು ವಿಧಿಸಬಹುದಾದ ದಂಡದ ಮೊತ್ತವನ್ನು ನಿರ್ಧರಿಸಲು ಆತನ ಹಣಕಾಸು ಸ್ಥಿತಿಯ ವೌಲ್ಯಮಾಪನ ನಡೆಸುವಂತೆ ಎನ್ಐಎ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಈ ನಡುವೆ ನ್ಯಾಯಾಲಯವು ಫಾರೂಕ ಅಹ್ಮದ್ ದಾರ್ ಅಲಿಯಾಸ್ ಬಿಟ್ಟಾ ಕರಾಟೆ, ಶಬ್ಬೀರ್ ಶಾ, ಮಸರತ್ ಆಲಂ, ನವಲ ಕಿಶೋರ್ ಕಪೂರ್ ಮತ್ತಿತರರು ಸೇರಿದಂತೆ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕರ ವಿರುದ್ಧ ವಿಧ್ಯುಕ್ತ ಆರೋಪಗಳನ್ನು ರೂಪಿಸಿದೆ.
ಪ್ರಕರಣದಲ್ಲಿ ಘೋಷಿತ ಅಪರಾಧಿಗಳಾಗಿರುವ ಲಷ್ಕರೆ ತೈಬಾ ಸ್ಥಾಪಕ ಹಫೀಝ್ ಸಯೀದ್ ಮತ್ತು ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಅವರ ವಿರುದ್ಧವೂ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು.

ಬುಧವಾರ ಮಲಿಕ್ ಗೆ ಶಿಕ್ಷೆಯ ಪ್ರಮಾಣ ಕುರಿತು ನ್ಯಾಯಾಲಯದ ತೀರ್ಪಿಗೆ ಮುನ್ನ ಶ್ರೀನಗರದ ವಿವಿಧೆಡೆಗಳಲ್ಲಿ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯುಂಟಾಗದಂತೆ ಭಾರೀ ಭದ್ರತೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕ ಸಾರಿಗೆ ಎಂದಿನಂತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News