×
Ad

ವಿಜಯೇಂದ್ರಗೆ ತಪ್ಪಿದ ಪರಿಷತ್ ಟಿಕೆಟ್: ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು ಹೀಗೆ...

Update: 2022-05-25 18:35 IST
photo: twitter@BYVijayendra

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿನ 7 ಸ್ಥಾನಗಳಿಗೆ ಜೂ.3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ಪಕ್ಷವು ನಾಲ್ವರು ಅಭ್ಯರ್ಥಿಗಳನ್ನು ಘೋಷಿಸಿದ್ದು, ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಟಿಕೆಟ್ ನೀಡದಿರುವ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. 

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ವಿಜಯೇಂದ್ರಗೆ ಪರಿಷತ್ತಿನ ಟಿಕೆಟ್ ಕೈತಪ್ಪಿದಕ್ಕೆ ವಿಶೇಷ ಚರ್ಚೆಗಳು ಆಗುತ್ತಿವೆ. ಆದರೆ, ಅದರ ಅಗತ್ಯವಿಲ್ಲ. ವಿಜಯೇಂದ್ರ ಸದ್ಯ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕೆಲ ಮಾರ್ಪಾಟುಗಳಾಗುವ ಸಾಧ್ಯತೆಗಳಿವೆ' ಎಂದು ಇದೇ ವೇಳೆ ಸ್ಪಷ್ಟಣೆ ನೀಡಿದರು.

‘ಬಿಜೆಪಿ ಎಂದೂ ಶಕ್ತಿ ಮತ್ತು ಸಾಮರ್ಥ್ಯ ಇರುವವರನ್ನು ಕೈಬಿಟ್ಟಿಲ್ಲ. ಹೀಗಾಗಿ ವಿಜಯೇಂದ್ರ ಅವರಿಗೂ ಮುಂದೆ ಹೆಚ್ಚಿನ ಅವಕಾಶಗಳು ಸಿಗಲಿವೆ. ಪ್ರಧಾನಿ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ವಿಜಯೇಂದ್ರಗೆ ಯಾವ ರೀತಿಯ ಸ್ಥಾನಮಾನಗಳನ್ನು ನೀಡಬೇಕೆಂಬ ಬಗ್ಗೆ ತೀರ್ಮಾನ ಮಾಡಲಿದ್ದಾರೆ ಎಂದು ಯಡಿಯೂರಪ್ಪ ವಿವರಣೆ ನೀಡಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗುತ್ತದೆಯೇ? ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ‘ವಿಧಾನಸಭೆ ಚುನಾವಣೆಗೆ ಇನ್ನೂ ಕಾಲಾವಕಾಶವಿದೆ. ಈಗಲೇ ಆ ಬಗ್ಗೆ ಚರ್ಚೆ ಬೇಡ. ಆ ಸಂದರ್ಭ ಬರಲಿ, ಈಗಲೇ ಏಕೆ ಆ ಚರ್ಚೆ' ಎಂದು ಮರು ಪ್ರಶ್ನೆ ಹಾಕಿದರು.

ಮುಂದಿನ‌ ಚುನಾವಣೆಯಲ್ಲಿ ಬಿಜೆಪಿ‌ ಮತ್ತೆ ಅಧಿಕಾರ ಹಿಡಿಯುವ ವಿಶ್ವಾಸ ಇದೆ. 2023ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ತರಬೇಕು ಅನ್ನುವುದೇ ನಮ್ಮ‌ಗುರಿ.  ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಸ್ಪಷ್ಟ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರುತ್ತೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News