''ರೈತರಿಗೆ ನೆರವಾಗಬೇಕು ಎಂಬುದು ನನ್ನ ಗುರಿ'': ಉಮ್ಮೇಸಾರಾ ಅಸ್ಮತ್

Update: 2022-05-25 14:31 GMT
ಉಮ್ಮೇಸಾರಾ ಅಸ್ಮತ್

ಚಿಕ್ಕಮಗಳೂರು, ಮೇ 25: ಕಾಫಿನಾಡಿನ ಯುವತಿಯೊಬ್ಬರು ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದಿಂದ ಬಿಎಸ್ಸಿ ತೋಟಗಾರಿಕೆ ವಿಷಯದಲ್ಲಿ 16 ಚಿನ್ನದ ಪದಕಗಳನ್ನು ಪಡೆಯುವ ಮೂಲಕ ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿ ವ್ಯಾಪ್ತಿಯಲ್ಲಿರುವ ಕಾರೇಹಟ್ಟಿ ಗ್ರಾಮದ ಕಾಫಿ ಬೆಳೆಗಾರ ಅಸ್ಮತ್ ಆಲಿ ಹಾಗೂ ರಹೀಮಾಬಾನು ದಂಪತಿ ಹಿರಿಯ ಮಗಳಾದ ಉಮ್ಮೇಸಾರಾ ಅಸ್ಮತ್ ಆಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಬಿಎಸ್ಸಿ ವಿಷಯದಲ್ಲಿ 16 ಚಿನ್ನದ ಪದಕಗಳನ್ನು ಪಡೆದ ಯುವತಿಯಾಗಿದ್ದು, ಬುಧವಾರ ವಿವಿ ಆವರಣದಲ್ಲಿ ನಡೆದ ಘಟಿಕೋತ್ಸವದಲ್ಲಿ ರಾಜ್ಯಪಾಲ ಹಾಗೂ ವಿವಿ ಕುಲಪತಿ  ಥಾವರ್ ಚಂದ್ ಗೆಹ್ಲೋಟ್ ಅವರು ಉಮ್ಮೇಸಾರಾ ಅವರಿಗೆ 16 ಚಿನ್ನದ ಪದಕಗಳನ್ನು ಪ್ರದಾನ ಮಾಡಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಕಾರೇಹಟ್ಟಿ ಗ್ರಾಮದ ಸಣ್ಣ ಕಾಫಿ ಬೆಳೆಗಾರರಾಗಿರುವ ಅಸ್ಮತ್ ಆಲಿ ಅವರು ಅಪ್ಟಟ ಕೃಷಿಕರಾಗಿದ್ದು, ಅಪ್ಪನ ಕೃಷಿ ಕೆಲಸಗಳನ್ನು ಬಾಲ್ಯದಿಂದಲೂ ನೋಡಿ ಬೆಳೆದ ಉಮ್ಮೇಸಾರಾ ಅವರಿಗೆ ಕೃಷಿ ಕ್ಷೇತ್ರದಲ್ಲೇ ಸಾಧನೆ ಮಾಡುವ ಇಚ್ಛೆ ಹೊಂದಿ  ಪಿಯುಸಿ ಬಳಿಕ ಬಿಎಸ್ಸಿ ತೋಟಗಾರಿಕೆ ವಿಷಯ ಆಯ್ಕೆ ಮಾಡಿಕೊಂಡು ಈ ಸಾಧನೆ ಮಾಡಿದ್ದಾರೆ. 

ಪ್ರಾಥಮಿಕ ಶಿಕ್ಷಣವನ್ನು ಗುಲ್ಲನ್‍ ಪೇಟೆ ಹಾಗೂ ಹಾಂದಿ ಗ್ರಾಮದಲ್ಲಿ ಪೂರೈಸಿದ ಉಮ್ಮೇಸಾರಾ ಪ್ರೌಢ ಶಿಕ್ಷಣವನ್ನು ಮೂಡಿಗೆರೆ ಪಟ್ಟಣದ ನಳಂದ ಶಾಲೆಯಲ್ಲಿ ಪಡೆದುಕೊಂಡಿದ್ದಾರೆ. ಎಸೆಸೆಲ್ಸಿಯಲ್ಲಿ ಶೇ.78 ಅಂಕ ಪಡೆದಿರುವ ಅವರು, ಮೂಡಿಗೆರೆ ಪಟ್ಟಣದಲ್ಲೇ ಇರುವ ಸೆಂಟ್ ಮಾರ್ಥಾಸ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿಷಯದಲ್ಲಿ ಶೇ.74 ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಪಿಯುಸಿ ಬಳಿಕ  ಬಳಿಕ ತೋಟಗಾರಿಕೆ ಕ್ಷೇತ್ರದಲ್ಲಿ ಶಿಕ್ಷಣ ಮುಂದುವರಿಸುವ ತನ್ನ ಇಚ್ಛೆಯನ್ನು ಪೋಷಕರ ಬಳಿ ಹೇಳಿಕೊಂಡಿದ್ದರು. ಮಗಳ ಇಚ್ಚೆಯಂತೆ ತಂದೆ ಅಸ್ಮತ್ ಆಲಿ ಅವರು ಪಿಯುಸಿ ಬಳಿಕ ಸಿಇಟಿ ಪರೀಕ್ಷೆ ಬರೆಯಲು ಸಹಕರಿಸಿದ್ದು, ಸಿಇಟಿ ಪರೀಕ್ಷೆಯ ಕೊನೆಯ ಸುತ್ತಿನಲ್ಲಿ ರ್ಯಾಂಕ್ ಪಡೆದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿವಿಯ ಅಧೀನದಲ್ಲಿರುವ ಶಿರಸಿ ತೋಟಗಾರಿಕೆ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡಿದ್ದರು. ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡುತ್ತಿದ್ದ ಮಗಳ ಶಿಕ್ಷಣಕ್ಕೆ ತಂದೆ ತಾಯಿ ಹೆಗಲುಕೊಟ್ಟು ಶ್ರಮಿಸಿದ್ದರ ಫಲವಾಗಿ ಉಮ್ಮೇಸಾರ ಬಿಎಸ್ಸಿ ತೋಟಗಾರಿಕೆ ವಿಷಯದ ಅಂತಿಮ ಪರೀಕ್ಷೆಯಲ್ಲಿ ವಿವಿಯ ಅಧೀನಕ್ಕೊಳಪಟ್ಟಿರುವ 8 ತೋಟಗಾರಿಕೆ ಕಾಲೇಜುಗಳ ವಿದ್ಯಾರ್ಥಿಗಳ ಪೈಕಿ ಅತೀ ಹೆಚ್ಚು ಅಂಕ ಪಡೆಯುವ ಮೂಲಕ 16 ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಬಿಎಸ್ಸಿ ತೋಟಗಾರಿಕೆ ವಿಷಯದಲ್ಲಿ ಪದವಿಗಳಿಸಿದ ಬಳಿಕ ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಮಾಡಿ ರೈತರ ನೆರವಾಗುವ ಇಂಗಿತ ವ್ಯಕ್ತಪಡಿಸಿರುವ ಉಮ್ಮೇಸಾರ, ಇದಕ್ಕಾಗಿ ಮುಂದಿನ ಶಿಕ್ಷಣವನ್ನು ವಿದೇಶದಲ್ಲಿ ಮುಂದುವರಿಸಲು ಸಜ್ಜಾಗುತ್ತಿದ್ದಾರೆ. ಇಟಲಿ ದೇಶದಲ್ಲಿ ಎಮ್‍ಎಸ್ಸಿ ಮಾಡಿ ನಂತರ ಸ್ವದೇಶಕ್ಕೆ ಹಿಂದಿರುಗಿ ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವುದು ಉಮ್ಮೇಸಾರ ಅವರ ಗುರಿಯಾಗಿದೆ.

ಬುಧವಾರ ಬಾಗಲಕೋಟೆ ತೋಟಗಾರಿಕೆ ವಿವಿಯ ಘಟಿಕೋತ್ಸವದಲ್ಲಿ 16 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿರುವ ಉಮ್ಮೇಸಾರ ಅವರು, ವಿವಿ ವ್ಯಾಪ್ತಿಯ 8 ಕಾಲೇಜುಗಳ ಪೈಕಿ ಅತೀ ಹೆಚ್ಚು ಅಂಕ ಪಡೆದಿರುವುದಕ್ಕೆ 1 ಚಿನ್ನದ ಪದಕ, ಶಿರಸಿ ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿಗಳ ಪೈಕಿ ಅತೀ ಹೆಚ್ಚು ಅಂಕ ಪಡೆದಿರುವುದಕ್ಕೆ 1 ಚಿನ್ನದ ಪದಕಗಳನ್ನು ಪಡೆದಿದ್ದು, ಉಳಿದ 14 ಚಿನ್ನದ ಪದಕಗಳು ಡೋನರ್ಸ್ ಪದಕಗಳಾಗಿವೆ.

'ವಿದೇಶಕ್ಕೆ ತೆರಳಲು ಹಣಕಾಸಿನ ಸಮಸ್ಯೆ'

ಬಿಎಸ್ಸಿ ತೋಟಗಾರಿಕೆಯಲ್ಲಿ 16 ಚಿನ್ನದ ಪದಕಗಳೊಂದಿಗೆ ಸಾಧನೆ ಮಾಡಿರುವ ಉಮ್ಮೇಸಾರಾ ಅವರ ತಂದೆ ಸಣ್ಣ ಕಾಫಿ ಬೆಳೆಗಾರರಾಗಿದ್ದು, ಮಗಳ ಆಸೆಯಂತೆ ಶಿಕ್ಷಣಕ್ಕೆ ಬ್ಯಾಂಕ್ ಸಾಲ ಮಾಡಿ ಉತ್ತಮ ಶಿಕ್ಷಣ ಕಲ್ಪಿಸಿದ್ದಾರೆ. ಪಿಯುಸಿ, ಬಿಎಸ್ಸಿ ಶಿಕ್ಷಣವನ್ನೂ ಸ್ಕಾಲರ್‍ಶಿಪ್ ಹಾಗು ಬ್ಯಾಂಕ್ ಸಾಲದಲ್ಲೇ ಪೂರೈಸಿರುವ ಉಮ್ಮೇಸಾರ ಅವರ ಮುಂದಿನ ವಿದೇಶದಲ್ಲಿ ಶಿಕ್ಷಣ ಪಡೆಯುವ ಕನಸಿಗೆ ಹಣಕಾಸಿನ ಸಮಸ್ಯೆ ಎದುರಾಗಿದೆ. ಇಟಲಿ ದೇಶದಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿ ಎಮ್‍ಎಸ್ಸಿ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಈಗಾಗಲೇ ಅವರು ಸಿದ್ಧತೆ ಮಾಡಿಕೊಂಡಿದ್ದಾರಾದರೂ ಹಣಕಾಸಿನ ಸಮಸ್ಯೆಯಿಂದಾಗಿ ಇನ್ನೂ ವಿದೇಶಕ್ಕೆ ತೆರಳು ಸಾಧ್ಯವಾಗಿಲ್ಲ. ಶಿಕ್ಷಣಕ್ಕಾಗಿ ಅವರು ಮತ್ತೆ ಬ್ಯಾಂಕ್ ಸಾಲಕ್ಕೆ ಮೊರೆ ಹೋಗುವಂತಾಗಿದೆ.


ನನ್ನ ತಂದೆ ಸಣ್ಣ ಕಾಫಿ ಬೆಳೆಗಾರರಾಗಿದ್ದು, ಬಾಲ್ಯದಿಂದಲೂ ಅವರೊಂದಿಗೆ ತೋಟದಲ್ಲಿ ಕೆಲಸ ಮಾಡುತ್ತಾ ಕೃಷಿಯಲ್ಲಿ ಆಸ್ತಕಿ ಬೆಳೆಯಿತು. ಈ ಕಾರಣಕ್ಕೆ ನಾನು ಪಿಯುಸಿ ಬಳಿಕ ತೋಟಗಾರಿಕೆ ವಿಷಯದಲ್ಲಿ ಪದವಿ ಪಡೆಯಲು ಮುಂದಾದೇ. 16 ಚಿನ್ನದ ಪದಕ ಪಡೆದಿರುವುದರಿಂದ ಸಂತೋಷವಾಗಿದೆ. ನನ್ನ ಸಾಧನೆಗೆ ಪೋಷಕರು, ಕಾಲೇಜು ಉಪನ್ಯಾಸಕರ ಸಹಕಾರ ಕಾರಣ. ಉತ್ತಮ ಅಂಕ ಪಡೆಯುವ ನಿಟ್ಟಿನಲ್ಲಿ ಪ್ರತಿದಿನ ಓದುತ್ತಿದ್ದೆ. ಶ್ರಮ ಹಾಕಿ ಓದಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ರೈತರಿಗೆ ನೆರವಾಗಬೇಕು ಎಂಬುದು ನನ್ನ ಗುರಿಯಾಗಿದೆ. ಇದಕ್ಕಾಗಿ ಇಟಲಿಯಲ್ಲಿ ಎಂಎಸ್ಸಿ ಮಾಡಿ ನಂತರ ಸ್ವದೇಶದಲ್ಲಿ ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಮಾಡುವುದು ನನ್ನ ಕನಸಾಗಿದೆ.

- ಉಮ್ಮೇಸಾರಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News