ಸೋಲಿನ ಭಯದಿಂದ ಬಿಜೆಪಿ ಸೇರಿದ ಹೊರಟ್ಟಿ: ಸಲೀಮ್ ಅಹ್ಮದ್

Update: 2022-05-25 14:56 GMT

ಧಾರವಾಡ, ಮೇ 25: ವಿಧಾನಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಸೋಲಿನ ಭಯದಿಂದ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಧಾರವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಹೊರಟ್ಟಿ ಸತತ ಏಳು ಬಾರಿ ಜಾತ್ಯತೀತ ಪಕ್ಷದಿಂದ ಸ್ಪರ್ಧೆ ಮಾಡಿದ್ದರಿಂದ, ಅವರಿಗೆ ಜಾತ್ಯತೀತವಾಗಿ ಮತಗಳು ಲಭ್ಯವಾಗಿ ಗೆಲುವು ಸಾಧಿಸಿದ್ದರು ಎಂದರು.

ಆದರೆ, ಈಗ ಬಸವರಾಜ ಹೊರಟ್ಟಿಗೆ ಸೋಲಿನ ಭಯ ಪ್ರಾರಂಭವಾಗಿದೆ. ಅಧಿಕಾರದ ಆಸೆಗಾಗಿ, ಮತ್ತೊಮ್ಮೆ ವಿಧಾನಪರಿಷತ್ತಿನ ಸಭಾಪತಿಯಾಗಬೇಕೆಂಬ ಉದ್ದೇಶದಿಂದ ಅವರು ಹೊರಟ್ಟಿ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂಬುದು ಎಲ್ಲ ಶಿಕ್ಷಕ ಬಂಧುಗಳಿಗೆ ಗೊತ್ತಾಗಿದೆ. ಎಂದು ಸಲೀಮ್ ಅಹ್ಮದ್ ಹೇಳಿದರು.

ಆದರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ಗುರಿಕಾರ ಕಳೆದ 40 ವರ್ಷಗಳಿಂದ ಪ್ರಾಮಾಣಿಕವಾಗಿ ಈ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದಾರೆ. ಅವರ ಮೇಲೆ ಯಾವುದೆ ಆಪಾದನೆಗಳಾಗಲಿ, ಕಳಂಕವಾಗಲಿ ಇಲ್ಲ. ಶಿಕ್ಷಕರು ಬದಲಾವಣೆ ಬಯಸಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರನ್ನು ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದರು. 

ಬಿಜೆಪಿ ಆಡಳಿತದಿಂದ ಶಿಕ್ಷಕರು ಭ್ರಮನಿರಸನಗೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳಿಗೆ ಶಿಕ್ಷಕರು ಯಾವ ಕಾರಣಕ್ಕಾಗಿ ಮತ ನೀಡಬೇಕು ಎಂದು ಪ್ರಶ್ನಿಸಿದ ಸಲೀಮ್ ಅಹ್ಮದ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದಕ್ಕಾಗಿಯೇ? ಅಥವಾ ಭ್ರಷ್ಟಾಚಾರ ಮಾಡುತ್ತಿರುವುದಕ್ಕಾಗಿಯೇ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News