ಕನ್ನಡದ ಮಕ್ಕಳಿಗೆ ವಿಷ ಉಣಿಸುವುದನ್ನು ಕೂಡಲೇ ನಿಲ್ಲಿಸಬೇಕು: ಕರವೇ ಅಧ್ಯಕ್ಷ ನಾರಾಯಣಗೌಡ

Update: 2022-05-25 16:30 GMT

ಬೆಂಗಳೂರು, ಮೇ 25: 'ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿಯ ಸಮರ್ಥನೆಗಾಗಿ ಸುಳ್ಳುಗಳನ್ನು ಹೇಳಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ನಿಲುವು ಖಂಡನಾರ್ಹವಾಗಿದ್ದು, ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಹಾಗೆಯೇ ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿಯನ್ನು ಕೂಡಲೇ ವಿಸರ್ಜಿಸಬೇಕು. ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿ ಮಾಡಿರುವ ಎಲ್ಲ ಬದಲಾವಣೆಗಳನ್ನೂ ಕೂಡಲೇ ನಿಲ್ಲಿಸಬೇಕು. ಕನ್ನಡದ ಮಕ್ಕಳಿಗೆ ವಿಷ ಉಣಿಸುವುದನ್ನು ಕೂಡಲೇ ನಿಲ್ಲಿಸಬೇಕು' ಎಂದು ಕರ್ನಾಟಕ ರಕ್ಷಣ ವೇದಿಕೆ(ಕರವೇ)ಯ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರು ಕಿಡಿಕಾರಿದ್ದಾರೆ.   

ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ಈ ಕೂಡಲೇ ಬರಗೂರು ರಾಮಚಂದ್ರಪ್ಪ, ದೇವನೂರ ಮಹಾದೇವ ಅವರು ಸೇರಿದಂತೆ ಸಾಹಿತಿಗಳು, ಶಿಕ್ಷಣ ತಜ್ಞರ ಸಭೆ ನಡೆಸಬೇಕು. ಪಠ್ಯಪುಸ್ತಕ ವಿವಾದವನ್ನು ಬಗೆಹರಿಸಬೇಕು. ನಾಡದ್ರೋಹಿಯ ಅಧ್ಯಕ್ಷತೆಯಲ್ಲಿ ರಚಿಸಲಾದ ಪಠ್ಯಪರಿಷ್ಕರಣೆಯ ಪುನರ್ ಪರಿಶೀಲನಾ ಸಮಿತಿಯನ್ನು ರದ್ದುಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾಷಾ ಅಭಿಮಾನ, ಪ್ರಾದೇಶಿಕವಾದ ದೇಶ ಎದುರಿಸುತ್ತಿರುವ ಸಮಸ್ಯೆಗಳು, ರಾಷ್ಟ್ರವಾದಕ್ಕೆ ಇವು ಕಂಟಕ ಎಂದು ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ ಎಂದು ವರದಿಯಾಗಿದೆ. ನಾಡದ್ರೋಹಿಗಳು ಮಾತ್ರ ಇಂತಹ ವಾದ ಮಾಡುತ್ತಾರೆ. ಕನ್ನಡತನ ಎಂಬುದು ಭಾರತೀಯತೆಗೆ ಪೂರಕವೇ ಹೊರತು ಮಾರಕವಲ್ಲ ಎಂದು ಉಲ್ಲೇಖಿಸಿದ್ದಾರೆ.

ತನ್ನ ನಾಡನ್ನು, ನಾಡನುಡಿಯನ್ನು ಪ್ರೀತಿಸುವುದು ಹೇಗೆ ರಾಷ್ಟ್ರದ್ರೋಹ ಆಗುತ್ತದೆ? ಮಕ್ಕಳಿಗೆ ಇಂಥ ಪಾಠವನ್ನು ಕಲಿಸಿದರೆ ಅವರು ನಾಡದ್ರೋಹಿಗಳಾಗಿ ಬೆಳೆಯುವುದಿಲ್ಲವೇ? ಭಾಷಾಭಿಮಾನ ರಾಷ್ಟ್ರೀಯತೆ ಶತ್ರು ಎಂದು ಹೇಳುವ ಪಠ್ಯವನ್ನು ಕನ್ನಡಿಗರು ಯಾಕೆ, ಹೇಗೆ ಸಹಿಸಿಕೊಳ್ಳಬೇಕು ಎಂದು ಅವರು ಪ್ರಶ್ನಿಸಿದ ಅವರು, ಪ್ರಾದೇಶಿಕವಾದವು ದೇಶದ ಸಮಸ್ಯೆ ಎಂದು ಬಿಂಬಿಸಿರುವ ಪಾಠವನ್ನು ಈ ಕೂಡಲೇ ಕಿತ್ತುಹಾಕಬೇಕು. ರಾಮಮೂರ್ತಿ, ಅ.ನ.ಕೃಷ್ಣರಾಯರು, ಡಾ.ರಾಜಕುಮಾರ್ ಸೇರಿದಂತೆ ಕನ್ನಡ ಚಳವಳಿ ಕಟ್ಟಿಬೆಳೆಸಿದ ಸಾವಿರಾರು ಮಹಾನಾಯಕರಿಗೆ ಮಾಡುತ್ತಿರುವ ಅವಮಾನ ಇದಾಗುತ್ತದೆ ಎಂದರು.

ನಾನು ಎಡ, ಬಲ ಯಾವ ಪಂಥಕ್ಕೂ ಸೇರಿದವನಲ್ಲ. ನಾನು ರಾಷ್ಟ್ರಕವಿ ಕುವೆಂಪು ಅವರು ಹೇಳಿದ ಮನುಷ್ಯಪಂಥಕ್ಕೆ ಸೇರಿದವನು. ಪಠ್ಯಪುಸ್ತಕ ಬದಲಾವಣೆ ಹೆಸರಿನಲ್ಲಿ ಆಗುತ್ತಿರುವ ಅಪಾಯಕಾರಿ ಬೆಳವಣಿಗೆಗಳು ತಿಳಿದಿದ್ದು, ಕನ್ನಡ ಸಾಹಿತಿಗಳ ಬೆನ್ನಿಗೆ ನಾವು ನಿಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News