ಸಾಹಿತಿ ದೇವನೂರ ಮಹಾದೇವರನ್ನು ಭೇಟಿಯಾಗಿ ಗೊಂದಲಗಳನ್ನು ಬಗೆಹರಿಸುತ್ತೇನೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

Update: 2022-05-25 17:30 GMT

ಮೈಸೂರು,ಮೇ.25: ಪಠ್ಯಪರಿಷ್ಕರಣೆಗೆ ಹಿರಿಯ ಸಾಹಿತಿ ದೇವನೂರು ಮಹದೇವ ಆಕ್ಷೇಪ ವಿಚಾರಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿ  ಮಾಧ್ಯಮಗಳಲ್ಲಿ ಅವರ ಪತ್ರದ ಬಗ್ಗೆ ನೋಡಿದೆ. ಆದರೆ ನನಗೆ ಅವರಿಂದ ಯಾವುದೇ ಪತ್ರ ಬಂದಿಲ್ಲ. ಈ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ತಿಳಿಸಿದರು.

ನಗರದ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ಆಶೀರ್ವಾದ ಪಡೆದು ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ದೇವನೂರು ಮಹಾದೇವ ಹಿರಿಯ ಸಾಹಿತಿಗಳು. ದೇವನೂರು ಮಹಾದೇವ ಹೇಳುವುದರಲ್ಲೂ ಸತ್ಯವಿದೆ. ನಾವು ಅಳವಡಿಕೆ ಮಾಡಿರುವುದರಲ್ಲೂ ಸತ್ಯವಿದೆ. ನಾನು ದೇವನೂರು ಮಹಾದೇವ ಅವರನ್ನು ಭೇಟಿಯಾಗುತ್ತೇನೆ. ಅವರಿಗಿರುವ ಗೊಂದಲಗಳನ್ನು ಕೇಳಿ ಬಗೆಹರಿಸುತ್ತೇನೆ. ನಮ್ಮದು ಓನ್ಲೀ ಸಂಸ್ಕೃತಿ ಅಲ್ಲ, ಆಲ್ ಆಫ್ ಯು ಸಂಸ್ಕೃತಿ.ಒಳ್ಳೆಯದನ್ನು ಪಡೆದು ಪಠ್ಯದಲ್ಲಿ ಅಳವಡಿಕೆ ಮಾಡಿದ್ದೇವೆ. ಕಾಂಗ್ರೆಸ್ ನದ್ದು ನೀಚಬುದ್ಧಿ. ವಿಚಾರಗಳ ಚರ್ಚೆಯಲ್ಲಿ ಸೋತು ಕಾಂಗ್ರೆಸ್ ನವರು ವ್ಯಕ್ತಿಗತ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ. ಪಠ್ಯವನ್ನೇ ಓದದೆ ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. 

ನಾವು ಶಿಕ್ಷಣವನ್ನ ಮಾತ್ರ ಬದಲಾವಣೆ ಮಾಡಿಲ್ಲ. ಎಲ್ಲವನ್ನು ಬದಲಾವಣೆ ಮಾಡಿದ್ದೇವೆ. ಈ ದೇಶದಲ್ಲಿ ವಾಜಪೇಯಿ ಸರ್ಕಾರ ಬರುವವರೆಗು ಅಂತರಾಜ್ಯ ರಸ್ತೆ ಇರಲಿಲ್ಲ. ನಾವು ರಸ್ತೆಯನ್ನು ಬದಲಾವಣೆ ಮಾಡಿದ್ದೇವೆ. ಅದರ ಬಗ್ಗೆಯು ಮಾತನಾಡಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.

 ಪಠ್ಯ ಪುಸ್ತಕದ ಮೇಲೆ ಮಾತನಾಡುತ್ತಿರುವವರು ವಿಷಯದ ಮೇಲೆ ಮಾತನಾಡುತ್ತಿದ್ದಾರಾ? ರಾಜಕೀಯದ ಮೇಲೆ ಮಾತನಾಡುತ್ತಿದ್ದಾರಾ? ಬರಗೂರು ರಾಮಚಂದ್ರಪ್ಪ ಪಠ್ಯ ಬದಲಾಯಿಸಿದ್ರೆ ಅದು ವಿರೋಧವಲ್ಲ. ಆಗಾ ಒಂದೇ ಪಂಥದ ಪಠ್ಯ ಪುಸ್ತಕ ಸೇರಿದಾಗ ಅದು ತಪ್ಪಲ್ಲ ಅಲ್ವಾ. ಈಗ ಮಾತ್ರ ನಿಮಗೆ ಪಂಥಗಳು ಕಾಣುತ್ತಿದೆ. ನಮ್ಮ ಇಚ್ಚೆ ಪಂಥದಲ್ಲ. ನಾವು ಎಲ್ಲವನ್ನು ಒಪ್ಪಿ ಶ್ರೇಷ್ಠವಾದುದ್ದನ್ನು ಕೊಡುತ್ತಿದ್ದೇವೆ. ಬಿಜೆಪಿ ಪಠ್ಯ ಸಂಸ್ಕರಣಾ ಮಾಡುತ್ತಿದ್ದಂತೆ. ನಿಮಗೆ ಚಾತುರ್ ವರ್ಣ ಎಲ್ಲ ನೆನಪಾಗುತ್ತಿದೆ. ವಾಜಪೇಯಿ ಪ್ರಧಾನಿ ಆಗುವ ಮೊದಲು ಅಮೇರಿಕಾ ಹೇಳಿದಂತೆ ನಡೆಯುತ್ತಿತ್ತು.

ಈ ದೇಶದಲ್ಲಿ ಯಾವಾಗ ಯುದ್ಧ ಆಗಬೇಕು ಎಂಬುದನ್ನು ಅಮೇರಿಕಾ ತೀರ್ಮಾನ ಮಾಡುತ್ತಿತ್ತು. ಆದರೆ ವಾಜಪೇಯಿ ಕಾರ್ಗೀಲ್ ಯುದ್ಧದಲ್ಲಿ ಕೊನೆ ಸೈನಿಕ ಹೋರಾಡುವವರೆಗೆ ಯಾರ ಜೊತೆ ಮಾತಾಡಲ್ಲ ಅಂದಿದ್ರು. ಕಾಂಗ್ರೆಸ್ ಯಾರ್ ಯಾರಿಗೋ ರಾಜಿ ಮಾಡಿಕೊಂಡು ರಾಜಕೀಯ ಮಾಡಿದೆ. ಆದರೆ ನಾವು ರಾಜಕೀಯ ಮಾಡಿರೋದು ಈ ಜನರಿಗಾಗಿ ಈ ನೆಲಕ್ಕಾಗಿ, ಇಲ್ಲಿನ ಸಂಸ್ಕೃತಿಗಾಗಿ. ಬೇರೆ ದೇಶಗಳಲ್ಲಿ ನಮಗೆ 400-500 ವರ್ಷಗಳ ಇತಿಹಾಸ ಇಲ್ಲ. ಭಾರತಕ್ಕೆ 5-6 ಸಾವಿರ ವರ್ಷಗಳ ಇತಿಹಾಸ ಇದೆ. ನಾವು ಜ್ಞಾನ ಇಟ್ಟುಕೊಂಡು ಬೇರೆ ದೇಶಕ್ಕೆ ಹೋದವರು. ಬೇರೆಯವರಂತೆ ಪಿಸ್ತೂಲ್, ಕತ್ತಿ ಹಿಡಿದುಕೊಂಡು ಬಂದವರಲ್ಲ ಎಂದು ಬಿಸಿ ನಾಗೇಶ್ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News