ಹಿಂದುತ್ವ ಕಾರ್ಯಕರ್ತ ಪುನೀತ್​​ ಕೆರೆಹಳ್ಳಿ ವಿರುದ್ಧ ಎಫ್ ಐಆರ್

Update: 2022-05-26 11:18 GMT
ಪುನೀತ್​​ ಕೆರೆಹಳ್ಳಿ

ಮಂಡ್ಯ : ನಡುರಸ್ತೆಯಲ್ಲೇ ವ್ಯಕ್ತಿ ಮೇಲೆ ಹಲ್ಲೆಗೆ ಯತ್ನಿಸಿರುವ ಆರೋಪಕ್ಕೆ ಸಂಬಂಧಿಸಿ ಹಿಂದುತ್ವ ಕಾರ್ಯಕರ್ತ ಪುನೀತ್​​ ಕೆರೆಹಳ್ಳಿ ಮೇಲೆ  ಮಳವಳ್ಳಿ ಟೌನ್​​ ಸ್ಟೇಷನ್​ನಲ್ಲಿ ಪ್ರಕರಣ ದಾಖಲಾಗಿದೆ. 

ಮೇ 23 ರಂದು ತಡರಾತ್ರಿ ಮಳವಳ್ಳಿ ಸಾರಿಗೆ ಬಸ್‌ನಿಲ್ದಾಣದ ಬಳಿಗೆ ತನ್ನನ್ನು ದೂರವಾಣಿ ಕರೆಮಾಡಿ ಕರೆಸಿಕೊಂಡ ಪುನೀತ್ ಕೆರೆಹಳ್ಳಿ ತನ್ನ ಸಂಗಡಿಗರ ಜತೆ ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಕುತ್ತಿಗೆಪಟ್ಟಿ ಹಿಡಿದು ಕಪಾಳಮೋಕ್ಷ ಮಾಡಿ ಕೊಲೆ ಮಾಡಲು ಯತ್ನಿಸಿದರು. ಮಧ್ಯಪ್ರವೇಶ ಮಾಡಿದ ಮೊಳ್ಳೇದೊಡ್ಡಿ ಲಿಂಗರಾಜು ಮತ್ತು ಸುನಿಲ್ ಎಂಬುವರು ಬಂದು ನನ್ನನ್ನು ರಕ್ಷಿಸಿ ಊರಿಗೆ ಕಳುಹಿಸಿದರು ಎಂದು ಕುಮಾರ್ ದೂರಿನಲ್ಲಿ ಆರೋಪಿಸಿದ್ದಾರೆ.

ಕುಮಾರ್ ಮೇ 24ರಂದು ದೂರು ನೀಡಿದ್ದು, 25 ರಂದು ಪೊಲೀಸರು ಪುನೀತ್ ಕೆರೆಹಳ್ಳಿ ವಿರುದ್ಧ ಐಪಿಸಿ ಕಲಂ 504, 506, 323, 149ಅಡಿ ಪ್ರಕರಣ ದಾಖಲಿಸಿ  ಮಳವಳ್ಳಿಯ ಅಡಿಷನಲ್ ಸಿವಿಲ್ ಅಂಡ್ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಿದ್ದಾರೆ.

‘ನಾನು ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿದ್ದಾಗ ಪುನೀತ್ ಕೆರೆಹಳ್ಳಿ ಸ್ನೇಹಿತನಾಗಿದ್ದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಕೆರೆಹಳ್ಳಿ ಮೇಲೆ ವೇಶ್ಯಾವಾಟಿಕೆ ಆರೋಪ ಕೇಳಿಬಂದ ವಿಷಯ ಹರಿದಾಡಿತ್ತು. ಅದನ್ನು ಟ್ಯಾಗ್ ಮಾಡಿ  ಪುನೀತ್‌ಗೆ ಬುದ್ದಿವಾದ ಹೇಳಿದ್ದೆ. ಈ ಹಿನ್ನೆಲೆಯಲ್ಲಿ ನನಗೆ ಪುನೀತ್ ಹಲ್ಲೆ ಮಾಡಿದ್ದಾನೆ’ ಎಂದು ದೂರುದಾರ ಕುಮಾರ್ ‘ವಾರ್ತಾಭಾರತಿಗೆ’ ತಿಳಿಸಿದರು.

‘ಮೇ 23ರ ರಾತ್ರಿ ನಡೆದ ಲಿಂಗರಾಜು ಎಂಬುವರು ಜಗಳ ಬಿಡಿಸಿ ನನ್ನನ್ನು ಮನೆಗೆ ಕಳುಹಿಸಿದರು. ಆದರೆ, ಅಂದೇ ತಡರಾತ್ರಿ ಪುನೀತ್ ಕೆರೆಹಳ್ಳಿ ಪೊಲೀಸ್ ಠಾಣೆಗೆ ತೆರಳಿ ನನ್ನ ವಿರುದ್ಧ ಹಲ್ಲೆ ಆರೋಪ ಮಾಡಿ ದೂರು ನೀಡಿದ್ದರು. ಈ ವಿಷಯ ಪೊಲೀಸರಿಂದ ತಿಳಿದ ಬಳಿಕ ಮಾರನೆ ದಿನ(ಮೇ 24) ನಾನು ಠಾಣೆಗೆ ಬಂದು ಪುನೀತ್ ಕೆರೆಹಳ್ಳಿ ಮಳವಳ್ಳಿಗೆ ಬಂದು ನನ್ನನ್ನು ಕರೆಸಿಕೊಂಡು ಹಲ್ಲೆ ನಡೆಸಿದ್ದಾನೆ. ಕ್ರಮ ಜರುಗಿಸಬೇಕು ಎಂದು ದೂರು ನೀಡಿದ್ದೇನೆ’ ಎಂದು ಕುಮಾರ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News