ವೀಳ್ಯದೆಲೆ ಮೂಲಕ ಭವಿಷ್ಯ ನಿಖರವಾಗಿ ಹೇಳುವವರಿಗೆ 1 ಲಕ್ಷ ರೂ. ಬಹುಮಾನ !

Update: 2022-05-26 12:06 GMT
ನರೇಂದ್ರ ನಾಯಕ್‌

ಮಂಗಳೂರು : ಭೂತಕಾಲ ಮತ್ತು ಭವಿಷ್ಯದ ಬಗ್ಗೆ ನಿಖರವಾಗಿ ಹೇಳಬಲ್ಲ, ವಿಶೇಷ ಶಕ್ತಿಯನ್ನು ಹೊಂದಿರು ವವರಿಗೆ ರಾಷ್ಟ್ರೀಯ ವಿಚಾರವಾದಿ ಸಂಘದ ಅಧ್ಯಕ್ಷ ನರೇಂದ್ರ ನಾಯಕ್ ಅವರು ಮತ್ತೊಮ್ಮೆ ಸವಾಲು ಹಾಕಿದ್ದಾರೆ.

ಭವಿಷ್ಯವನ್ನು ನಿಖರವಾಗಿ ತಿಳಿಸಬಲ್ಲ ಜ್ಯೋತಿಷಿಗಳ ಬಗ್ಗೆ ಮತ್ತೆ ಚರ್ಚೆಯಾಗುತ್ತಿರುವಂತೆಯೇ, ಮಳಲಿ ಮಸೀದಿಗೆ ವಿವಾದಕ್ಕೆ ಸಂಬಂಧಿಸಿ ಜ್ಯೋತಿಷಿಯೊಬ್ಬರು ಗತಕಾಲದ ಬಗ್ಗೆ ವೀಳ್ಯದೆಲೆ ಮೂಲಕ ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಅತಿಮಾನುಷ ಶಕ್ತಿ ಹೊಂದಿರುವವರು ತಮ್ಮ ಸವಾಲನ್ನು ಎದುರಿಸಿ ಬಹುಮಾನವನ್ನು ಪಡೆಯುವಂತೆ ಅವರು ಆಹ್ವಾನ ನೀಡಿದ್ದಾರೆ.

ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ಬಹಿರಂಗ ಸವಾಲು ಹಾಕಿರುವ ವಿಚಾರವಾದಿ ನರೇಂದ್ರ ನಾಯಕ್, ‘‘ಮಳಲಿಯಲ್ಲಿ ವೀಳ್ಯದೆಲೆಯ ಮೂಲಕದ ಭವಿಷ್ಯವು ಊಹೆ ಅಥವಾ ಸ್ಥಿರ ಫಲಿತಾಂಶವಾಗಿರಬಹುದು. ಇಂತಹ ವ್ಯಕ್ತಿಗಳ ಶಕ್ತಿಯನ್ನು ಪರೀಕ್ಷಿಸಲು ನಾವು ಇಲ್ಲಿ ನಿಖರವಾದ ವಿಧಾನವನ್ನು ಅಳವಡಿಸಲಿದ್ದೇವೆ. ಈ ಪ್ರಕಟನೆ ಪ್ರಕಟಗೊಳ್ಳುವ ವೇಳೆಗೆ ಭವಿಷ್ಯವನ್ನು ತಿಳಿಸಬೇಕಾದ ವಸ್ತುಗಳನ್ನು ಇರಿಸುವ ಮತ್ತು ಅದನ್ನು ಸೀಲ್ ಮಾಡಿರುವ ಸಮಯವು ಭೂತಕಾಲವಾಗಿರುತ್ತದೆ ಮತ್ತು ಅದನ್ನು ತೆರೆಯುವ ಸಮಯ ಭವಿಷ್ಯವಾಗಿರುತ್ತದೆ. ಭವಿಷ್ಯವನ್ನು ಹೇಳುವವರಿಗೆ ಹಾಕಲಾಗಿರುವ ಸವಾಲುಗಳನ್ನು ಒಳಗೊಂಡ ಆರು ಪ್ರತ್ಯೇಕ ಕವರ್‌ಗಳನ್ನು ಲಕೋಟೆಯೊಂದರಲ್ಲಿ 2022ರ ಮೇ 26ರ 11.33ಕ್ಕೆ ಸೀಲ್ ಮಾಡಲಾಗಿದೆ. ಅದನ್ನು ಜೂನ್ 1ರಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಬೆಳಗ್ಗೆ 10.30ಕ್ಕೆ ತೆರೆಯಲಾಗುವುದು. ಅಲ್ಲಿಯೇ ಬಹುಮಾನವನ್ನು ಘೋಷಿಸಲಾಗುವುದು.

ಭವಿಷ್ಯ ಹೇಳುವವರು ಮುಚ್ಚಿದ ಆರು ಲಕೋಟೆಗಳಲ್ಲಿ ಏನಿದೆ ಎಂಬುದನ್ನು ನಿಖರವಾಗಿ ಹೇಳತಕ್ಕದ್ದು. ಈ ಸವಾಲನ್ನು ಎದುರಿಸಲು ಧಾರ್ಮಿಕ ನಂಬಿಕೆಗಳು, ಜಾತಿ, ಪಂಥ, ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಎಲ್ಲರಿಗೂ ಮುಕ್ತವಾಗಿದೆ. ಆಸಕ್ತರು ತಮ್ಮ ಉತ್ತರಗಳನ್ನು narenyen@gmail.comಗೆ ಇಮೇಲ್ ಅಥವಾ  9448216343 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮಾಡಬಹುದು.

ಮೇ 31ರ ಮಧ್ಯರಾತ್ರಿವರೆಗೆ ಕಳುಹಿಸಲಾಗುವ ಎಲ್ಲಾ ಉತ್ತರಗಳನ್ನು ಫಲಿತಾಂಶಕ್ಕೆ ಪರಿಗಣಿಸಲಾಗುವುದು. ಸಮಯ ಕಡಿಮೆ ಇರುವುದರಿಂದ ಅಂಚೆ ಮೂಲಕ ಪ್ರವೇಶಗಳನ್ನು ಸ್ವೀಕರಿಸಲಾಗುವುದಿಲ್ಲ’’ ಎಂದು ಹೇಳಿದ್ದಾರೆ. 

ಸೀಲ್ ಮಾಡಲಾದ ಕವರ್‌ನ ಒಳಗಡೆ ಪ್ರಶ್ನೆಗಳಿಂದ ಕೂಡಿದ ಆರು ಸಣ್ಣ ಕವರ್‌ಗಳಿವೆ. ಪ್ರಶ್ನೆಗಳಿಗೆ  ಮಾಹಿತಿಯನ್ನು ಒಳಗೊಂಡಿರುತ್ತದೆ. ನಿಯಮಗಳ ಪ್ರಕಾರ ಪ್ರವೇಶ ಬಯಸಿದವರ ಎಲ್ಲಾ ಉತ್ತರಗಳು ಸರಿಯಾಗಿದ್ದಲ್ಲಿ ಅವರನ್ನು ವಿಜೇತರೆಂದು ಘೋಷಿಸಲಾಗುವುದು. ಲಕೋಟೆಯೊಳಗೆ  ಕರೆನ್ಸಿ ನೋಟು ಅಥವಾ ಕಾಗದ ಎಂಬ ಉತ್ತರಗಳನ್ನು ಪರಿಗಣಿಸಲಾಗದು. ಏನಿದೆ ? ಕರೆನ್ಸಿ ಎಂದು ಹೇಳುವುದಾದರೆ ಅದು ಯಾವ ದೇಶದ್ದು, ಅದರ ಮೌಲ್ಯ, ಅದರ ಡಿನೋಮಿನೇಶನ್, ಸೀರಿಯಲ್ ನಂಬರ್ ಎಲ್ಲವನ್ನೂ ನಿಖರವಾಗಿ ನಮೂದಿಸಬೇಕು. ಕಾಗದ ಎಂದಾದರೆ ಅದರಲ್ಲಿ ಏನು ಬರೆಯಲಾಗಿದೆ. ಏನು ನಮೂದಿಸಲಾಗಿದೆ ಏನಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು. ನಿಯಮಗಳಿಗೆ ಬದ್ಧರಾಗಿ ಎಲ್ಲಾ ಆರು ಕವರ್‌ಗಳಿಗೆ ಸರಿಯಾಗಿ ಉತ್ತರಿಸಿದವರಿಗೆ ತೆರಿಗೆಯನ್ನು ಕಡಿತಗೊಳಿಸಿ ಒಂದು ಲಕ್ಷ ರೂ. ಬಹುಮಾನ ನೀಡಲಾಗುವುದು.

ಒಂದಕ್ಕಿಂತ ಹೆಚ್ಚಿನ ಮಂದಿ ಉತ್ತರ ನೀಡಿದರೂ ಪ್ರತಿಯೊಬ್ಬರಿಗೂ ತಲಾ ಒಂದು ಲಕ್ಷ ರೂ. ಬಹುಮಾನ ದೊರೆಯಲಿದೆ. ಹಣಕಾಸಿನ ಲಭ್ಯತೆಯ ಮೇರೆಗೆ ಗರಿಷ್ಠ 50 ಮಂದಿಗೆ ಮಾತ್ರವೇ ಬಹುಮಾನ ದೊರೆಯಲಿದೆ. ಅದಕ್ಕೂ ಮೀರಿ ನಿಖರ ಉತ್ತರಗಳು ಬಂದಲ್ಲಿ ಸವಾಲುಗಾರ ದಿವಾಳಿತನವನ್ನು ಘೋಷಿಸಲಿದ್ದಾರೆ’’ ಎಂದು ನರೇಂದ್ರ ನಾಯಕ್ ಫೇಸ್‌ಬುಕ್‌ನಲ್ಲಿ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News