ವಿಕಲಚೇತನರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುವ ಜವಾಬ್ದಾರಿ ನಾಗರಿಕರದ್ದು: ಡಾ. ಕುಮಾರ್

Update: 2022-05-26 14:59 GMT

ಮಂಗಳೂರು : ವಿಕಲಚೇತನರಿಗೆ ಸಮಾಜದಲ್ಲಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡುವ ಜವಾಬ್ದಾರಿ ಎಲ್ಲಾ ನಾಗರಿಕರದ್ದಾಗಿದೆ ಎಂದು ದ.ಕ.ಜಿಪಂ ಸಿಇಒ ಡಾ.ಕುಮಾರ್ ಅಭಿಪ್ರಾಯಪಟ್ಟರು.

ಕೇಂದ್ರ ಸರಕಾರದ ನವರತ್ನ ಎಂಟರ್‌ಪ್ರೈಸ್‌ನ ಆರ್‌ಇಸಿ ಲಿ. ಹಾಗೂ ಕೃತಕ ಅಂಗಾಂಗ ಉತ್ಪಾದಕ ಕಾರ್ಪೋರೇಷನ್ ಸಹಯೋಗದಲ್ಲಿ ಗುರುವಾರ ನಗರದ ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ ವಿಕಲಚೇತನರಿಗೆ ಕೃತಕ ಉಪಕರಣ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಹಾಗೂ ಕೇಂದ್ರ ಸರಕಾರಗಳ ಅನುದಾನ, ಗ್ರಾಮನಿಧಿ ಹಾಗೂ ಇತರೆ ಹಣಕಾಸಿನಲ್ಲಿ ವಿಕಲಚೇತನರ ಕಲ್ಯಾಣ ಚಟುವಟಿಕೆಗಳಿಗೆಂದೇ ಶೇ.೫ರಷ್ಟು ಅನುದಾನವನ್ನು ಕಡ್ಡಾಯವಾಗಿ ಮೀಸಲಿರಿಸಲಾಗುತ್ತದೆ. ಅವರಲ್ಲಿ ಸೌಲಭ್ಯ ವಂಚಿತರನ್ನು ಗುರುತಿಸಿ ಪ್ರಥಮ ಆದ್ಯತೆ ಮೇರೆಗೆ ಸವಲತ್ತುಗಳನ್ನು ನೀಡಬೇಕು, ಈ ರೀತಿಯ ಸೌಲಭ್ಯಗಳನ್ನು ಪಡೆಯುವಲ್ಲಿ ಸಹಾಯವಾಗಲು ಅಂಗವೈಕಲ್ಯ ಪ್ರಮಾಣ ಪತ್ರ ಹಾಗೂ ಯುಡಿ ಗುರುತಿನ ಚೀಟಿಯನ್ನು ವಿಕಲಚೇತನರು ಪಡೆಯುವಂತೆ ಡಾ.ಕುಮಾರ್ ಸಲಹೆ ನೀಡಿದರು.

ಮೇಯರ್ ಪ್ರೇಮಾನಂದ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಜಗದೀಶ್ ಪೈ ಮಾತನಾಡಿದರು.

ಕರ್ನಾಟಕ ಮೀನುಗಾರಿಕಾ ಅಭಿವೃಧ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಆರ್.ಇ.ಸಿ ಲಿ,ನ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಆರ್.ಅನ್‌ಬಾಲಗನ್, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಗೋಪಾಲ ಕೃಷ್ಣ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಉಪನಿರ್ದೇಶಕ ಟಿ.ಪಾಪಭೋವಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News