×
Ad

ಮೈಸೂರು: ಸನ್ನಡತೆ ಆಧಾರದ ಮೇಲೆ 12 ಕೈದಿಗಳ ಬಿಡುಗಡೆ

Update: 2022-05-26 23:01 IST

ಮೈಸೂರು,ಮೇ.26: ಸನ್ನಡತೆ ಆಧಾರದ ಮೇಲೆ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಮಾಫಿ ಸೇರಿದಂತೆ 14 ವರ್ಷ ಶಿಕ್ಷೆ ಪೂರೈಸಿದ 12 ಮಂದಿ ಕೈದಿಗಳಿಗೆ ಗುರುವಾರ ಬಿಡುಗಡೆ ಭಾಗ್ಯ ದೊರೆಯಿತು. ಈ ಮೂಲಕ ಜೈಲು ಹಕ್ಕಿಗಳು ಬಂಧ ಮುಕ್ತರಾದರು.

ಮಂಡಿ ಮೊಹಲ್ಲಾದ ಮನೋಹರ, ಕೈಲಾಸಪುರಂನ ಅಫ್ರೋಜ್ ಪಾಷ, ವಿದ್ಯಾರಣ್ಯಪುರಂನ ರಂಗಸ್ವಾಮಿ, ತಿ.ನರಸೀಪುರ ತಾಲೂಕಿನ ಬೇವಿನಹಳ್ಳಿ ಗ್ರಾಮದ ಶಿವಪ್ರಕಾಶ್, ಹನುಮನಾಳು ಗ್ರಾಮದ ವೆಂಕಟೇಶ್, ತಲಕಾಡು ಅರುಂಧತಿನಗರದ ಚಂದ್ರ, ಪಿರಿಯಾಪಟ್ಟಣದ ಬಿ.ಪಿ.ರಜಾಕ್, ತಮ್ಮಡಹಳ್ಳಿ ಗ್ರಾಮದ ಮಹದೇವ, ಆವರ್ತಿ ಗ್ರಾಮದ ಹೇಮಂತ, ಕೆ.ಆರ್.ಪೇಟೆ ತಾಲೂಕು ಐಚನಹಳ್ಳಿ ಗ್ರಾಮದ ಸುರೇಶ್, ಕೊಳ್ಳೇಗಾಲ ತಾಲೂಕು ಕನ್ನೂರು ಗ್ರಾಮದ ಆನಂದ, ಹುಲ್ಲಹಳ್ಳಿಯ ಮಹದೇವನಾಯ್ಕ ಅವರನ್ನು ಬಿಡುಗಡೆ ಮಾಡಲಾಯಿತು.

ಈ ವೇಳೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಮಾತನಾಡಿ, ರಾಜ್ಯ ಸರ್ಕಾರದ ಆದೇಶದಂತೆ ಸನ್ನಡತೆ ಆಧಾರದ ಮೇಲೆ 12 ಮಂದಿ ಕೈದಿಗಳನ್ನು ಇಂದು ಬಿಡುಗಡೆ ಮಾಡಲಾಗಿದೆ. ಯಾವುದೋ ಸಂದರ್ಭದಲ್ಲಿ ಆದ ಕೆಟ್ಟ ಘಟನೆಯಿಂದಾಗಿ ಕಾನೂನು ಶಿಕ್ಷೆ ಅನುಭವಿಸಿದ್ದಾರೆ. ಕಾರಾಗೃಹದಲ್ಲಿ ಅವರು ತೋರಿದ ಒಳ್ಳೆಯ ನಡತೆಯ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಕಾರಾಗೃಹದಲ್ಲಿ ಅವರನ್ನು ನಂಬರಿನಿಂದ ಕರೆಯುತ್ತಿದ್ದರು. ಇದೀಗ ಅವರನ್ನು ಹೆಸರಿನಿಂದ ಕರೆಯುತ್ತಾರೆ. ಇನ್ನು ಮುಂದೆ ಅವರು ಸಮಾಜಕ್ಕೆ ಮಾದರಿ ನಾಗರಿಕರಾಗಿ ಬದುಕಬೇಕು ಎಂದರು.

ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ.ದಿವ್ಯಶ್ರೀ ಮಾತನಾಡಿ, ಸರ್ಕಾರದ ಹಾಗೂ ಕಾರಾಗೃಹದ ನಿಯಮಗಳಂತೆ ಉತ್ತಮ ನಡತೆ, ವರ್ತನೆ ತೋರಿದ ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ. ಬಿಡುಗಡೆಗೊಂಡವರಲ್ಲಿ ಇಬ್ಬರ ಹೆಸರನ್ನು ಸರ್ಕಾರ ವಿವಿಧ ಕಾರಣಗಳಿಗಾಗಿ 7 ಬಾರಿ ತಿರಸ್ಕರಿಸಿತ್ತು. ಕೊನೆಗೂ ಅವರಿಗೆ ಬಿಡುಗಡೆ ಭಾಗ್ಯ ದೊರೆತಿದೆ. ಇಂದು ಬಿಡುಗಡೆಯಾದವರು ಇತರರಿಗೆ ಮಾದರಿಯಾಗಬೇಕು. ಕಾರಾಗೃಹದಲ್ಲಿರುವವರು ಇವರನ್ನು ನೋಡಿ ಪ್ರೇರಿತರಾಗಿ ಉತ್ತಮ ನಡತೆಯ ಆಧಾರದಲ್ಲಿ ಬಿಡುಗಡೆಯಾಗಬೇಕು ಎಂದರು.

ಕಾರಾಗೃಹದಲ್ಲಿ ವಿವಿಧ ಕೌಶಲ ತರಬೇತಿ ಪಡೆದ ಹಲವರು ಸ್ವಂತ ಉದ್ಯೋಗ ಕಂಡುಕೊಂಡಿದ್ದಾರೆ. ಇಬ್ಬರು ಕೈದಿಗಳು ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯುತ್ತಿದ್ದಾರೆ. ಅವರಿಗೆ ಬೇಕಾದ ಸಂಪರ್ಕ ತರಗತಿ, ಸೌಲಭ್ಯಗಳನ್ನು ಕಾರಾಗೃಹದಲ್ಲೇ ನೀಡಲಾಗುತ್ತಿದೆ.

-ಕೆ.ಸಿ.ದಿವ್ಯಶ್ರೀ, ಕಾರಾಗೃಹದ ಮುಖ್ಯ ಅಧೀಕ್ಷಕಿ.

ನನ್ನ ಹೆಂಡತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಆ ಆರೋಪ ನನ್ನ ಮೇಲೆ ಬಂತು. 14 ವರ್ಷ ಶಿಕ್ಷೆ ಜೈಲಿನಲ್ಲೇ ಕಳೆದಿದ್ದೇನೆ. ಉಳಿದ ಜೀವನವನ್ನು ತಾಯಿ, ಮಕ್ಕಳೊಂದಿಗೆ ಕಳೆಯುತ್ತೇನೆ.

-ಮಹದೇವ ನಾಯ್ಕ,   ಬಿಡುಗಡೆಯಾದ ಕೈದಿ.

ನನ್ನ ಮೂರು ವರ್ಷದ ಮಗಳನ್ನು ಎತ್ತಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದೆ. ನನ್ನ ಸಂಬಂಧಿಯೊಬ್ಬರು ನನ್ನ ಮೇಲಿನ ದ್ವೇಷಕ್ಕೆ ಹಿಂದಿನಿಂದ ಬಂದು ಹಲ್ಲೆ ಮಾಡಿದರು. ಈ ವೇಳೆ ನನ್ನ ಮಗಳು ಮೃತಪಟ್ಟಳು. ಅವಳನ್ನು ನಾನೇ ಕೊಲೆ ಮಾಡಿದ್ದೇನೆ ಎಂದು ಶಿಕ್ಷೆಯಾಯಿತು. 17 ವರ್ಷ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದೇನೆ.

  -ಬಿ.ಪಿ.ರಜಾಕ್, ಬಿಡುಗಡೆಗೊಂಡ ಕೈದಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News