ಬೆಳಗಾವಿ | ಮದುವೆ ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ವಧೂ-ವರರ ಮೇಲೆ ಎಂಇಎಸ್ ಕಾರ್ಯಕರ್ತರಿಂದ ಹಲ್ಲೆ: ಆರೋಪ

Update: 2022-05-27 13:06 GMT

ಬೆಳಗಾವಿ, ಮೇ 27: ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಎಂಇಎಸ್‍ನ ಪುಂಡಾಟ ಶುರುವಾಗಿದೆ. ಮದುವೆ ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿ ಕುಣಿದ ಕಾರಣಕ್ಕೆ ವಧು-ವರ ಸೇರಿ ಕನ್ನಡಿಗ ಯುವಕರ ಮೇಲೆ ಎಂಇಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಗುರುವಾರ ತಡರಾತ್ರಿ ನಡೆದಿದ್ದು, ಈ ಹಿನ್ನೆಲೆಯಲ್ಲಿ 10 ಜನ ಎಂಇಎಸ್ ಕಾರ್ಯಕರ್ತರ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.    

ಬೆಳಗಾವಿ ತಾಲೂಕಿನ ಧಾಮಣೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ವರ ಸಿದ್ದು ಸೈಬಣ್ಣವರ್, ವಧು ರೇಷ್ಮೆ, ವರನ ತಮ್ಮ ಭರಮಾ ಸೇರಿ ಐವರ ಮೇಲೆ ಎಂಇಎಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ವಧು ವರ ಸೇರಿ ಐವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಓರ್ವನಿಗೆ ಗಂಭೀರ ಗಾಯವಾಗಿದೆ. ಆತನಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಏನಿದು ಘಟನೆ: ಗುರುವಾರ ಧಾಮಣೆ ಗ್ರಾಮದಲ್ಲಿ ಸೈಬಣ್ಣವರ ಕುಟುಂಬದ ಮದುವೆ ಸಮಾರಂಭವಿತ್ತು. ಹೀಗಾಗಿ ಕುಟುಂಬಸ್ಥರು ರಾತ್ರಿ ಬ್ಯಾಂಡ್‍ನೊಂದಿಗೆ ಮೆರವಣಿಗೆ ಮೂಲಕ ವಧು-ವರನನ್ನು ಮನೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಯುವಕರು ಕನ್ನಡ ಧ್ವಜ ಹಿಡಿದು ‘ಕರುನಾಡೇ ಕೈ ಚಾಚಿದೆ ನೋಡೆ’ ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದರು.

ಈ ವೇಳೆ ಸ್ಥಳಕ್ಕಾಗಮಿಸಿದ ಎಂಇಎಸ್‍ನ ಕೆಲವು ಯುವಕರು ಕನ್ನಡ ಧ್ಚಜ ಹಿಡಿದು ಕನ್ನಡ ಹಾಡಿಗೆ ನೃತ್ಯ ಮಾಡಿದ್ದಕ್ಕೆ ಆಕ್ಷೇಪವೆತ್ತಿದ್ದಾರೆ. ಅಜಯ ಯಳ್ಳೂರಕರ, ಆಕಾಶ ಸೇರಿ ಹಲವು ಯುವಕರು ಹಲ್ಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಬೆಳಗಾವಿ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು 10 ಜನ ಎಂಇಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದು, ಅವರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. 

ಹಳೆಯ ದ್ವೇಷದಿಂದ ಹಲ್ಲೆ

‘ಹಳೆಯ ದ್ವೇಷವನ್ನಿಟ್ಟುಕೊಂಡು, ಧಾಮಣೆ ಗ್ರಾಮದ ಮದುವೆ ಮೆರವಣಿಗೆಯಲ್ಲಿ ಅದೇ ಗ್ರಾಮದಲ್ಲಿ ವಾಸಿಸುತ್ತಿರುವ ಎಂಇಎಸ್ ಕಾರ್ಯಕರ್ತರು ವಧು-ವರ ಸೇರಿ ಐವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 10 ಜನ ಎಂಇಎಸ್ ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ’.

-ಡಾ.ಬೋರಲಿಂಗಯ್ಯ, ಬೆಳಗಾವಿ ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News