ಕಾವೇರಿದ ಮಡಿಕೇರಿ ನಗರಸಭೆ ಸಾಮಾನ್ಯ ಸಭೆ: ಬಸ್ ನಿಲ್ದಾಣದ ಅವ್ಯವಸ್ಥೆ, ಕಲುಷಿತ ನೀರು ಪೂರೈಕೆ ಕುರಿತು ಚರ್ಚೆ

Update: 2022-05-27 13:29 GMT

ಮಡಿಕೇರಿ ಮೇ 27 : ನಗರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಮತ್ತು ಆಡಳಿತ ವ್ಯವಸ್ಥೆ ಹದಗೆಟ್ಟಿದೆ  ಎನ್ನುವ ಎಸ್‍ಡಿಪಿಐ ಸದಸ್ಯರ ಆರೋಪ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕಾವೇರಿದ ವಾತಾವರಣವನ್ನು ಸೃಷ್ಟಿಸಿತು.

ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿರೋಧ ಪಕ್ಷ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಸದಸ್ಯರುಗಳು ಆಡಳಿತ ಪಕ್ಷದ ಕಾರ್ಯ ವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ನಡುವೆ ಆಡಳಿತ ಪಕ್ಷದ ಸದಸ್ಯ ಅರುಣ್ ಶೆಟ್ಟಿ ಖಾಸಗಿ ಬಸ್ ನಿಲ್ದಾಣದ ಅವ್ಯವಸ್ಥೆಗಳ ಕುರಿತು ಸಭೆಯ ಗಮನ ಸೆಳೆದರು. ಶಾಲಾ, ಕಾಲೇಜುಗಳಿಗೆ ಬರುವ ಗ್ರಾಮೀಣ ವಿದ್ಯಾರ್ಥಿಗಳು ಬಸ್ ನಿಲ್ದಾಣದ ಅವ್ಯವಸ್ಥೆಯಿಂದ ಬೇಸತ್ತಿದ್ದಾರೆ. ಕುಡಿಯುವ ನೀರು ಮತ್ತು ಶೌಚಾಲಯಗಳಿಲ್ಲದೆ ಸಂಕಟ ಪಡುತ್ತಿದ್ದಾರೆ. ಹೈಟೆಕ್ ಬಸ್ ನಿಲ್ದಾಣದ ಹೆಸರಿನಲ್ಲಿ ಹಣ ಪೋಲು ಮಾಡಲಾಗಿದೆ ಎಂದು ಆರೋಪಿಸಿದರು. ಕಾಮಗಾರಿ ಕುರಿತು ತನಿಖೆ ನಡೆಸಿ, ಸಂಬಂಧಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು. 

ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಬಸ್ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟರು. ಅಲ್ಲದೆ ಖಾಸಗಿ ನಿರ್ವಹಣೆಗೆ ನೀಡಲು ಟೆಂಡರ್ ಕರೆಯಲಾಗುವುದೆಂದರು. ಬಸ್ ನಿಲ್ದಾಣದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಿಶೇಷ ಸಭೆ ನಡೆಸಲಾಗುವುದೆಂದು ಭರವಸೆ ನೀಡಿದರು.

ಎಸ್‍ಡಿಪಿಐ ಸದಸ್ಯರುಗಳಾದ ಅಮೀನ್ ಮೊಹಿಸಿನ್ ಹಾಗೂ ಮನ್ಸೂರ್ ಮಾತನಾಡಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ, ಜನರ ಸಮಸ್ಯೆಗಳಿಗೆ ಸ್ಪಂದನೆ ದೊರೆಯುತ್ತಿಲ್ಲ. ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡುತ್ತಿಲ್ಲವೆಂದು ಆರೋಪಿಸಿದರು.

 ಈ ಸಂದರ್ಭ ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯರು, ನಾವು ಅಧಿಕಾರಕ್ಕೆ ಬಂದು ಮೂರು ತಿಂಗಳಾಗಿದೆಯಷ್ಟೆ. ಆದರೂ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ಸಾಗುತ್ತಿದೆ ಎಂದರು.

ಗಣಪತಿ ಬೀದಿಯಲ್ಲಿರುವ ವಿದ್ಯುತ್ ಕಂಬ ಮತ್ತು ದೀಪಗಳ ಸಮಸ್ಯೆಗಳು ಇಲ್ಲಿಯವರೆಗೆ ಬಗೆಹರಿದಿಲ್ಲ. ಬಲ್ಬ್ ವಿಚಾರವಾಗಿ ಅಧಿಕಾರಿಗಳು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದು, ಯಾರಿಂದೂ ಸಮರ್ಪಕ ಉತ್ತರ ದೊರೆಯುತ್ತಿಲ್ಲ ಮತ್ತು ಸೂಕ್ತ ಕಾರಣಗಳನ್ನು ನೀಡುತ್ತಿಲ್ಲ. ಅಳವಡಿಸಿರುವ ಬಲ್ಬ್‍ಗಳನ್ನು ತೆಗೆಯಲು ಸೂಚಿಸಿದ್ದು, ಇದರಿಂದ ಇಲ್ಲಿನ ನಿವಾಸಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಈ ಬಗ್ಗೆ ಅಧಿಕಾರಿಗಳೇ ಉತ್ತರ ನೀಡಬೇಕು ಎಂದು ಅಮೀನ್ ಮೊಹಿಸಿನ್ ಒತ್ತಾಯಿಸಿದರು.

ಬಿಜೆಪಿ ಸದಸ್ಯ ಕೆ.ಎಸ್.ರಮೇಶ್ ಮಾತನಾಡಿ, ಯಾರ ಗಮನಕ್ಕೂ ಬಾರದೆ  ಗಣಪತಿ ಬೀದಿಗೆ ಮಾತ್ರ 100 ಎಲ್‍ಇಡಿ ಗಳನ್ನು ಅಳವಡಿಸಲಾಗಿದ್ದು, ತಕ್ಷಣ ತೆಗೆಯುವ ಕಾರ್ಯ ಆಗಬೇಕು ಎಂದರು.

ಕಾಂಗ್ರೆಸ್ ಸದಸ್ಯ ಬಿ.ವೈ.ರಾಜೇಶ್ ಮಾತನಾಡಿ ಈ ರೀತಿಯ ಗೊಂದಲಗಳಿಗೆ ಅಧಿಕಾರಿಗಳೇ ನೇರ ಹೊಣೆ ಎಂದು ಆರೋಪಿಸಿದರು.

::: ಕಲುಷಿತ ನೀರು :::

ನಗರದ ಹಲವು ಬಡಾವಣೆಗಳಿಗೆ ಕನ್ನಂಡಬಾಣೆಯ ಪಂಪ್‍ಹೌಸ್‍ನಿಂದ ಕಲುಷಿತ ನೀರು ಸರಬರಾಜಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅಮೀನ್ ಮೊಹಿಸಿನ್, ನೀರು ಶುದ್ಧೀಕರಣ ಯಂತ್ರ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು.

ಕನ್ನಂಡಬಾಣೆ ವಾರ್ಡ್ ಸದಸ್ಯ ಕೆ.ಎಸ್.ರಮೇಶ್ ಮಾತನಾಡಿ, ಈಗಾಗಲೇ ಇದರ ಬಗ್ಗೆ ಕ್ರಮ ಕೈಗೊಂಡಿದ್ದು, ಕನ್ನಂಡಬಾಣೆಯ ಪಂಪ್‍ಹೌಸ್ ಬಾವಿಗೆ ಕುಂಡಾಮೇಸ್ತ್ರಿಯಿಂದ ನೀರು ಬರುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ 2 ದಿನಗಳಲ್ಲಿ ನೀರು ಶುದ್ಧೀಕರಣ ಯಂತ್ರಕ್ಕೆ ಚಾಲನೆ ನೀಡಲಾಗುವುದು ಎಂದರು.  

ಉಪಾಧ್ಯಕ್ಷೆ ಸವಿತಾ ರಾಕೇಶ್, ಪೌರಾಯುಕ್ತ ರಾಮದಾಸ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News