ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ: ಜು.4ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

Update: 2022-05-27 14:42 GMT

ಬೆಂಗಳೂರು, ಮೇ 27: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೈಕಿ ಏಳು ಮಂದಿ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗದ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ಯ ನ್ಯಾಯಾಲಯ ವಿಚಾರಣೆಯನ್ನು ಜು.4ಕ್ಕೆ ಮುಂದೂಡಿಕೆ ಮಾಡಿದೆ.

ಶುಕ್ರವಾರ ವಿಚಾರಣೆಯ ವೇಳೆ 18 ಮಂದಿ ಆರೋಪಿಗಳ ಪೈಕಿ 11 ಮಂದಿಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಆದರೆ, ಉಳಿದ 7 ಮಂದಿ ಆರೋಪಿಗಳು ನರೇಂದ್ರ ದಾಭೋಲ್ಕರ್ ಮತ್ತು ಚಿಂತಕ ಗೋವಿಂದ ಪನ್ಸಾರೆ ಅವರ ಹತ್ಯೆಯಲ್ಲೂ ಆರೋಪಿಗಳು ಆಗಿರುವುದರಿಂದ ಅವರನ್ನು ಮಹಾರಾಷ್ಟ್ರದ ಕಾರಾಗೃಹದಲ್ಲಿ ಇರಿಸಲಾಗಿದ್ದು, ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು. 

ಅಮೋಲ್ ಕಾಳೆ, ಪರಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ಬಾಡ್, ಅಮಿತ್ ದೆಗ್ವೇಕರ್, ಭರತ್ ಕುರಣೆ, ಸುರೇಶ್ ಹೆಚ್ ಎಲ್, ರಾಜೇಶ್ ಬಂಗೇರ, ಸುಧನ್ವ ಗೊಂದಲೇಕರ್, ಶರದ್ ಕಲಸ್ಕರ್, ಮೋಹನ್ ನಾಯಕ್, ವಾಸುದೇವ್ ಸೂರ್ಯವಂಶಿ, ಸುಜಿತ್ ಕುಮಾರ್, ಮನೋಹರ ಎಡವೆ, ಶ್ರೀಕಾಂತ್ ಪಂಗರ್ಕರ್, ಕೆ.ಟಿ.ನವೀನ್ ಕುಮಾರ್ ಹಾಗೂ ಋಷಿಕೇಶ್ ದಿಯೋದಿಕರ್ ಪ್ರಕರಣದ ಆರೋಪಿಗಳಾಗಿದ್ದಾರೆ.

ಗೌರಿ ಲಂಕೇಶ್‍ರನ್ನು 2017ರಂದು ಸೆ.5ರಂದು ದುಷ್ಕರ್ಮಿಗಳು ಬೆಂಗಳೂರಿನ ನಿವಾಸದೆದುರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಧಾರವಾಡದಲ್ಲಿ ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ, ಕೊಲ್ಹಾಪುರದಲ್ಲಿ ಚಿಂತಕ ಗೋವಿಂದ ಪನ್ಸಾರೆ ಅವರ ಹತ್ಯೆಗೆ ಬಳಸಿದ ಪಿಸ್ತೂಲನ್ನೇ ಗೌರಿ ಅವರ ಹತ್ಯೆಗೆ ಬಳಕೆಯಾಗಿದೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News