''ಖಾಸಗಿ ಕೋಚಿಂಗ್ ಸೆಂಟರ್ ನಡೆಸುವವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ನಾಚಿಕೆಗೇಡು''

Update: 2022-05-28 13:26 GMT

ಮೈಸೂರು,ಮೇ.27: 'ರೋಹಿತ್ ಚಕ್ರ ತೀರ್ಥ ಯಾರು? ಆತನ ಹಿನ್ನಲೆ ಏನು, ಖಾಸಗಿ ಕೋಚಿಂಗ್ ಸೆಂಟರ್ ನಡೆಸುವವರನ್ನು ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು ನಾಚಿಕೆಗೇಡು, ಕೂಡಲೇ ಈ ಸಮಿತಿಯನ್ನು ವಿಸರ್ಜನೆ ಮಾಡಬೇಕು' ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,   ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ವಿವಾದದ ಸ್ವರೂಪ ಪಡೆದಿದೆ. ಹೀಗಾಗಿ ಈ ವರ್ಷ ಹಳೆಯ ಪಠ್ಯ ಕ್ರಮವನ್ನೇ ಮುಂದುವರಿಸಬೇಕು. ಹೀಗಾಗಿ ಮುದ್ರಣವಾಗಿ ವಿತರಣೆಯಾಗಿದ್ದರೂ ಅದನ್ನು ವಾಪಸ್ ಪಡೆಯಬೇಕು. ಇದರಿಂದ ಸರಕಾರಕ್ಕೆ ನಷ್ಟವಾದರೂ ಪರವಾಗಿಲ್ಲ ಎಂದು   ಒತ್ತಾಯಿಸಿದರು.

ಇತ್ತೀಚೆಗೆ ಮಾಡಿರುವ ಪಠ್ಯ ಪುಸ್ತಕ ಪರಿಷ್ಕರಣೆಗೆ  ವಿರೋಧ ವ್ಯಕ್ತಪಡಿಸಿ, ಪಠ್ಯ ಪುಸ್ತಕ ಪರಿಷ್ಕರಣೆ ಸರ್ವ ಸಮ್ಮತವಾಗಿರಬೇಕು. ಜನ ತಾಂತ್ರಿಕವಾಗಿರಬೇಕು, ಜಾತ್ಯಾತೀತ ಆಗಿರಬೇಕು. ಪ್ರಜಾಪ್ರಭುತ್ವಾದಿಯಾಗಿರಬೇಕು, ಇಡೀ ಶೈಕ್ಷಣಿಕ ಕ್ಷೇತ್ರವನ್ನು ಮಲಿನಗೊಳಿಸುವ ಹುನ್ನಾರ ಈಗ ನಡೆಯುತ್ತಿದೆ. ಶಿಕ್ಷಣ ಕ್ಷೇತ್ರವನ್ನು ಕೇಸರೀಕರಣ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೋಹಿತ್ ಚಕ್ರ ತೀರ್ಥ ಅಧ್ಯಕ್ಷತೆಯ ಪಠ್ಯ ಪರಿಷ್ಕರಣಾ ಸಮಿತಿ ವಿಸರ್ಜಿಸಬೇಕು. ರೋಹಿತ್ ಚಕ್ರತೀರ್ಥ ಶೈಕ್ಷಣಿಕ ಹಿನ್ನೆಲೆ ಏನು. ಕೋಚಿಂಗ್ ಸೆಂಟರ್ ನಡೆಸುತ್ತಿರುವ ಒಬ್ಬ ವ್ಯಕ್ತಿಯನ್ನು ಹೀಗೆ ಪಠ್ಯ ಪರಿಷ್ಕರಣಾ ಸಮಿತಿಗೆ ನೇಮಿಸಿದ್ದು ಸರಿಯಲ್ಲ. ನಾನು ಶಿಕ್ಷಣ ಸಚಿವನಾಗಿದ್ದಾಗ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದೆವು. ಆಗ ಒಟ್ಟು 27 ಸಮಿತಿ ರಚಿಸಿ ವಿಷಯ ಪರಿಣಿತರನ್ನು ನೇಮಿಸಲಾಗಿತ್ತು. ಈಗ ಕೇವಲ 9 ಜನರ ಸಮಿತಿ ರಚನೆ ಮಾಡಿದ್ದಾರೆ. ಅದರಲ್ಲೂ 8 ಮಂದಿ ಒಂದೇ ಜಾತಿಯವರಿದ್ದಾರೆ. ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿರ್ಗಮಿಸುವಾಗ ಹೀಗೆ ಸಮಿತಿ ರಚನೆ ಮಾಡಿ ಹೋಗಿದ್ದಾರಂತೆ. ಈ ಬಗ್ಗೆ ಸುರೇಶ್ ಕುಮಾರ್ ಈ ತನಕ ಪ್ರತಿಕ್ರಿಯಿಸಿಲ್ಲ. ಈಗಿರುವ ಸಮಿತಿ ಆರೆಸ್ಸೆಸ್ ಚಿಂತನೆಗಳನ್ನು ಪಠ್ಯದಲ್ಲಿ ಹೇರುವ ಪ್ರಯತ್ನ ಮಾಡಿದೆ. ಇದು ಸುತಾರಾಂ ಸರಿಯಲ್ಲ. ಪಠ್ಯಕ್ಕೆ 35 ಕೋಟಿ ಖರ್ಚಾಗಿದೆಯಂತೆ. ಆಗಿದ್ದರೆ ಆಗಲಿ, ಆ ಪಠ್ಯವನ್ನು ಜಾರಿಗೆ ತರಬಾರದು. ಮಕ್ಕಳ ಮನಸ್ಸಿನ ಮೇಲೆ ಬೇರೆ ಬೇರೆ ವಿಚಾರಗಳನ್ನು ಬಿತ್ತಬಾರದು ಎಂದರು.

ಈ ವಿಚಾರಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಮುಖ್ಯಮಂತ್ರಿಗಳು ಮಧ್ಯೆ ಪ್ರವೇಶಿಸಬೇಕು. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಸಿದ್ದಪಡಿಸಿರುವ ಪಠ್ಯಕ್ರಮವನ್ನು ರದ್ದುಗೊಳಿಸಬೇಕು. ಕಳೆದ ಬಾರಿಯ ಪಠ್ಯಕ್ರಮವನ್ನೇ ಮುಂಬರುವ ಶೈಕ್ಷಣಿಕ ವರ್ಷಕ್ಕೂ ಮುಂದುವರಿಸಬೇಕು. ಮುಂಬರುವ ಶೈಕ್ಷಣಿಕ ವರ್ಷಕ್ಕೆ ಸರ್ವರೂ ಒಪ್ಪುವ ಪಠ್ಯಕ್ರಮವನ್ನು ಜಾರಿಗೆ ತರಬೇಕು. ವಿವಿಧ ವಲಯಗಳ ತಜ್ಞರು, ಪೋಷಕರನ್ನು ಒಳಗೊಂಡ ಸಮಿತಿ ರಚಿಸಿ ನೂತನ ಪಠ್ಯ ಕ್ರಮವನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಂ.ಚಂದ್ರಶೇಖರ್, ದೇವರಾಜು, ಅರಸು ಪ್ರತಿಷ್ಠಾನ ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News