ಸಣ್ಣ ರೈತರ ಸಬಲೀಕರಣಕ್ಕಾಗಿ 5 ವರ್ಷದೊಳಗೆ 10 ಸಾವಿರ ಎಫ್‍ಪಿಒ ಸ್ಥಾಪನೆ: ಬಿ.ಸಿ.ಪಾಟೀಲ್

Update: 2022-05-27 17:19 GMT

ಬೆಂಗಳೂರು, ಮೇ 27: ಮುಂದಿನ 5 ವರ್ಷಗಳಲ್ಲಿ 10 ಸಾವಿರ ರೈತ ಉತ್ಪಾದಕ ಸಂಸ್ಥೆ(ಎಫ್‍ಪಿಒ)ಗಳನ್ನು ರಚಿಸಿ ಪ್ರೋತ್ಸಾಹಿಸಲು ಕೇಂದ್ರ ಸರಕಾರ ಗುರಿ ಹೊಂದಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಶುಕ್ರವಾರ ಜಿಕೆವಿಕೆಯಲ್ಲಿ ಹಮ್ಮಿಕೊಂಡಿದ್ದ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರ್‍ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಹೆಕ್ಟೇರ್‍ಗಿಂತಲೂ ಕಡಿಮೆ ಜಮೀನು ಹೊಂದಿರುವ 69 ಲಕ್ಷ ಕೃಷಿ ಕುಟುಂಬಗಳಿದ್ದು, ಅವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ತುಂಬಾ ಅವಶ್ಯಕವಾಗಿದೆ. 

ಈ ನಿಟ್ಟಿನಲ್ಲಿ ಎಲ್ಲಾ ಸಣ್ಣ ರೈತರನ್ನು ಒಗ್ಗೂಡಿಸಿ ರೈತ ಉತ್ಪಾದಕ ಸಂಸ್ಥೆಗಳನ್ನಾಗಿ ಮಾಡಿದ್ದಲ್ಲಿ ಅವರು ಸಬಲೀಕರಣರಾಗುವುದಲ್ಲದೇ, ಉತ್ತಮ ಕೃಷಿ ಉತ್ಪನ್ನಗಳನ್ನು ಬೆಳೆದು ಶೇಖರಿಸಿ ಸೂಕ್ತ ಮಾರುಕಟ್ಟೆಗಳಿಗೆ ಮಾರಾಟ ಮಾಡಿ ಉತ್ತಮ ಬೆಲೆ ಪಡೆದು ಆದಾಯ ಹೆಚ್ಚಿಸಿಕೊಳ್ಳಬಹುದು. ಇದಕ್ಕಾಗಿಯೇ ಎಫ್‍ಪಿಒಗಳನ್ನು ರಚಿಸುವುದು ಸೂಕ್ತವಾಗಿದೆ ಎಂದರು.

ಈ ಯೋಜನೆಯಡಿ ಪ್ರತಿ ರೈತ ಉತ್ಪಾದಕ ಸಂಸ್ಥೆಗಳಿಗೆ ಕೇಂದ್ರ ಸರಕಾರ 3 ವರ್ಷಗಳ ಅವಧಿಗೆ 18 ಲಕ್ಷ ರೂಗಳ ನಿರ್ವಹಣಾ ವೆಚ್ಚ ನೀಡಲಾಗುತ್ತದೆ. ಪ್ರತಿ ಗುಂಪು ಆಧಾರಿತ ವ್ಯವಹಾರಿಕ ಸಂಸ್ಥೆಗೆ ಮುಂಬರುವ 5 ವರ್ಷಗಳ ಅವಧಿಗೆ 25 ಲಕ್ಷ ರೂಗಳನ್ನು ಎಫ್‍ಪಿಒಗೆ 2 ಕೋಟಿಗಳವರೆಗೆ ಕೊಲ್ಯಟರಲ್ ಫ್ರೀ ಗ್ಯಾರಂಟಿ ಫಂಡ್ ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ಕೈಲಾಶ್ ಚೌದರಿ ಮಾತನಾಡಿ, ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸರಕಾರ ಹಲವು ಯೋಜನೆ ಹಮ್ಮಿಕೊಂಡಿದೆ. ರೈತ ಯೋಜನೆಗಳಿಗೆ ಕೃಷಿಕರ ಖಾತೆಗೆ ನೇರವಾಗಿ ಹಣ ಜಮಾ ಮಾಡುತ್ತಿವೆ ಎಂದರು.

ಕೇಂದ್ರ ಕೃಷಿ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಸಣ್ಣರೈತರಿಗೆ ಉತ್ತೇಜನ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಮುಂಚೂಣಿಯಲ್ಲಿವೆ. ಕೃಷಿಕರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುದು ಸಹ ಮುಖ್ಯ. ಈ ನಿಟ್ಟಿನಲ್ಲಿ ಇನ್ನು ಹೆಚ್ಚಿನ ಕ್ರಮ ಕೈಗೊಳ್ಳಬೇಕು ಸಾಧ್ಯವಾದರೆ ಪ್ರತ್ಯೇಕ ಮಾರುಕಟ್ಟೆ ಘಟಕಗಳನ್ನು ಇಲಾಖೆಗಳು ಸ್ಥಾಪಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರದ ಕೃಷಿ ಮಾರುಕಟ್ಟೆ ಮತ್ತು ರೈತಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ.ಎನ್.ವಿಜಯಲಕ್ಷ್ಮಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ರಾಜೇಂದ್ರಕುಮಾರ್ ಕಟಾರಿಯಾ, ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಡಾ.ಎಂ.ವಿ.ವೆಂಕಟೇಶ್, ಕೃಷಿ ನಿರ್ದೇಶಕಿ ನಂದಿನಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News