ಭಿನ್ನಚೇತನ ಮಗುವಿಗೆ ವಿಮಾನವೇರಲು ಅನುಮತಿ ನಿರಾಕರಣೆ ಪ್ರಕರಣ: ಇಂಡಿಗೋಗೆ 5 ಲಕ್ಷ ರೂ. ದಂಡ

Update: 2022-05-28 12:20 GMT

 ಹೊಸದಿಲ್ಲಿ: ರಾಂಚಿ ವಿಮಾನ ನಿಲ್ದಾಣದಲ್ಲಿ ಭಿನ್ನ ಸಾಮರ್ಥ್ಯದ ಮಗುವೊಂದಕ್ಕೆ ವಿಮಾನವೇರಲು ಅನುಮತಿ ನಿರಾಕರಿಸಿದ ಇಂಡಿಗೋ ಏರ್‍ಲೈನ್ಸ್ ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ರೂ. 5 ಲಕ್ಷ ದಂಡ ವಿಧಿಸಿದೆ.

ʼಬಾಲಕ ನೋಡಲು ಭೀತಿಯಲ್ಲಿದ್ದಂತೆ ಕಂಡಿದೆʼ ಎಂಬ ಕಾರಣಕ್ಕೆ ಆತನಿಗೆ ರಾಂಚಿ-ಹೈದರಾಬಾದ್ ವಿಮಾನವೇರಲು  ನಿರಾಕರಿಸಲಾಗಿತ್ತು ಎಂದು ಇಂಡಿಗೋ ಮೇ 9ರಂದು ತಿಳಿಸಿತ್ತು. ಬಾಲಕನಿಗೆ ವಿಮಾನವೇರಲು ಅವಕಾಶ ನೀಡದೇ ಇದ್ದುದರಿಂದ ಆತನ ಹೆತ್ತವರೂ ಪ್ರಯಾಣದಿಂದ ಹಿಂದೆ ಸರಿದಿದ್ದರು. ಈ ಸಂದರ್ಭ ವಿಮಾನ ನಿಲ್ದಾಣದಲ್ಲಿದ್ದ ಪ್ರಯಾಣಿಕರೊಬ್ಬರು ಈ ಘಟನೆಯನ್ನು ಗಮನಿಸಿ ಈ ಕುರಿತು ಫೇಸ್ಬುಕ್ ಪೋಸ್ಟ್ ಒಂದನ್ನು ಮಾಡಿದ್ದರು. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ತನಿಖೆಗಾಗಿ ತ್ರಿಸದಸ್ಯರ ಸಮಿತಿ ರಚಿಸಲಾಗಿತ್ತಲ್ಲದೆ ವಿಮಾನಯಾನ ಸಂಸ್ಥೆಯಿಂದಲೂ ವರದಿ ಕೇಳಿತ್ತು.

ಬಾಲಕ ಭಯದಲ್ಲಿದ್ದಂತೆ ಕಂಡಿತ್ತು ಎಂಬ ಇಂಡಿಗೋ ವಿವರಣೆಯಿಂದ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಸಮಾಧಾನವಾಗದ ಹಿನ್ನೆಲೆಯಲ್ಲಿ ದಂಡ ವಿಧಿಸಲು ನಿರ್ಧರಿಸಿತು.

"ಸಂಸ್ಥೆಯು ಈ ವಿಶೇಷ ಮಗುವಿಗೆ ಸಂಬಂಧಿಸಿದ ಪ್ರಕರಣ ನಿಭಾಯಿಸಲು ವಿಫಲವಾಗಿದೆ ಹಾಗೂ ಪರಿಸ್ಥಿತಿ ಬಿಗಡಾಯಿಸಲು ಕಾರಣವಾಯಿತು" ಎಂದು ಡಿಜಿಸಿಎ ಹೇಳಿದೆ. "ಈ ಪ್ರಕರಣವನ್ನು ಅನುಕಂಪದಿಂದ ನಿಭಾಯಿಸಬಹುದಾಗಿತ್ತು. ಸೂಕ್ತ ನಿಯಮಗಳಾನುಸಾರ ರೂ 5 ಲಕ್ಷ ದಂಡ ವಿಧಿಸಲು ನಿರ್ಧರಿಸಲಾಗಿದೆ" ಎಂದು ನಿರ್ದೇಶನಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News