ಪಿಎಫ್‍ಐ ರ‍್ಯಾಲಿಯಲ್ಲಿ ಪ್ರಚೋದನಕಾರಿ ಘೋಷಣೆ ಪ್ರಕರಣ: ಬಾಲಕನ ತಂದೆ ಸಹಿತ 18 ಮಂದಿಯ ಬಂಧನ

Update: 2022-05-28 14:16 GMT

ತಿರುವನಂತಪುರಂ: ಅಲಪ್ಪುಝ ಜಿಲ್ಲೆಯಲ್ಲಿ ಮೇ 21ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆಯೋಜಿಸಿದ್ದ ʼಸೇವ್ ದಿ ರಿಪಬ್ಲಿಕ್ʼ ರ್ಯಾಲಿಯಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಕೇರಳ ಪೊಲೀಸರು ಶುಕ್ರವಾರ ಇನ್ನೂ 18 ಮಂದಿಯನ್ನು ಬಂಧಿಸಿದ್ದಾರೆ ಮತ್ತು ಬಾಲಕನ ತಂದೆಯನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ರ್ಯಾಲಿಯದ್ದೆಂದು ತಿಳಿಯಲಾದ ವೀಡಿಯೋವೊಂದರಲ್ಲಿ ವ್ಯಕ್ತಿಯೊಬ್ಬನ ಹೆಗಲನ್ನೇರಿದ್ದ ಬಾಲಕನೊಬ್ಬ ಕೇರಳದ ಹಿಂದುಗಳು ಮತ್ತು ಕ್ರೈಸ್ತರ ವಿರುದ್ಧ ಘೋಷಣೆಗಳನ್ನು ಕೂಗಿದ್ದ. ಆ ಬಾಲಕ ಕೂಗುತ್ತಿದ್ದ ಘೋಷಣೆಗಳನ್ನು ಪುನರುಚ್ಛರಿಸಿದ ಆರೋಪದ ಮೇಲೆ ಶುಕ್ರವಾರ 18 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದಕ್ಕೂ ಮುಂಚೆ ಆಲಪ್ಪುಝ ಜಿಲ್ಲಾ ಪಿಎಫ್‍ಐ ಅಧ್ಯಕ್ಷ ನವಾಝ್ ವಂದನಂ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಜಿಲ್ಲಾ ಪಿಎಫ್‍ಐ ಕಾರ್ಯದರ್ಶಿ ಮುಜೀಬ್ ಮತ್ತು ಇತರ ಕೆಲ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದ್ದು ಮುಜೀಬ್ ಸದ್ಯ ತಲೆಮರೆಸಿಕೊಂಡಿದ್ದಾರೆ.

ಮೇ 21ರ ಕಾರ್ಯಕ್ರಮದಲ್ಲಿ ಕೂಗಲಾದ ಘೋಷಣೆಗಳು ಸಂಘಟನೆಯ ನೀತಿಗೆ ವಿರುದ್ಧವಾಗಿತ್ತು, ಈ ಕುರಿತು ಪರಿಶೀಲಿಸಲಾಗುವುದು ಎಂದು ಪಿಎಫ್‍ಐ ಈ ಹಿಂದೆ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News