ಅಮಾನತುಗೊಂಡ ಮುಖ್ಯ ಪೊಲೀಸ್ ಪೇದೆಯಿಂದ 300ಕ್ಕೂ ಹೆಚ್ಚು ಸುಲಿಗೆ ಕರೆ
ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ಬ್ಯೂರೋದ ಅಧಿಕಾರಿಯೆಂದು ಬಿಂಬಿಸಿಕೊಂಡು, ಸೇವೆಯಿಂದ ಅಮಾನತುಗೊಂಡಿದ್ದ ಮುಖ್ಯಪೇದೆಯೊಬ್ಬ 300ಕ್ಕೂ ಹೆಚ್ಚು 'ವಸೂಲಿ ಕರೆ' ಮಾಡಿದ್ದಾನೆ ಎನ್ನಲಾಗಿದ್ದು, ಇದರೊಂದಿಗೆ ಸರ್ಕಾರಿ ಅಧಿಕಾರಿಗಳ ವಸೂಲಿ ಕರೆ ಪ್ರಕರಣ ಹೊಸ ತಿರುವು ಪಡೆದಿದೆ ಎಂದು timesofindia ವರದಿ ಮಾಡಿದೆ.
ಶುಕ್ರವಾರ ಬಾಗಲಕೋಟೆಯ ಜಂಟಿ ವಿಶೇಷ ತಂಡ ಮತ್ತು ಎಸಿಬಿ ಪೊಲೀಸರು, ಅಮಾನತುಗೊಂಡಿದ್ದ ಮುಖ್ಯಪೇದೆ ಮುರುಗಪ್ಪ ನಿಂಗಪ್ಪ ಕಂಬಾರ (56) ಎಂಬಾತನನ್ನು ಬಂಧಿಸಿದ್ದು, ಈತನ ಸಹಚರ ರಜನೀಕಾಂತ್ (46) ಕೂಡಾ ವಸೂಲಿ ದಂಧೆಯಲ್ಲಿ ಷಾಮೀಲಾದ ಆರೋಪದಲ್ಲಿ ಬಂಧಿತನಾಗಿದ್ದಾನೆ.
ಲೋಕಾಯುಕ್ತದ ಬೆಳಗಾವಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಪ್ರಮುಖ ಶಂಕಿತ ಆರೋಪಿ ಮುರುಗಪ್ಪ ನಿಂಗಪ್ಪ ಕಂಬಾರ, ನಾಲ್ಕು ವರ್ಷ ಹಿಂದೆ ಅಮಾನತುಗೊಂಡಿದ್ದ. ಈತ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಸದಗಲ ಗ್ರಾಮದವನು. ರಜನೀಕಾಂತ್ ಎಂಬಾತ ಹಾಸನದ ಉದ್ಯಮಿ. ಹಿಂಡಲಗಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಅವಧಿಯಲ್ಲಿ ಇಬ್ಬರೂ ಆತ್ಮೀಯರಾಗಿದ್ದರು.
ಕುಂಬಾರ ವಸೂಲಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದರೆ, ರಜನೀಕಾಂತ್ ವಂಚನೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ. ಕುಂಬಾರ ವ್ಯಾಜ್ಯಗಳನ್ನು ಬಗೆಹರಿಸಲು ಹಣ ನೀಡುವಂತೆ ಕರೆ ಮಾಡುತ್ತಿದ್ದ. ಸರ್ಕಾರಿ ಅಧಿಕಾರಿಗಳು ನೀಡಿದ ಹಣವನ್ನು ರಜನೀಕಾಂತ್ ಬ್ಯಾಂಕಿನಿಂದ ಪಡೆಯುತ್ತಿದ್ದ. 40ಕ್ಕೂ ಹೆಚ್ಚು ವಸೂಲಿ ಪ್ರಕರಣದಲ್ಲಿ ಷಾಮೀಲಾಗಿದ್ದ ಕುಂಬಾರ್ ಇಡೀ ದಂಧೆಯ ಮಾಸ್ಟರ್ ಮೈಂಡ್ ಎನ್ನಲಾಗಿದೆ.
ಉನ್ನತ ಅಧಿಕಾರಿಗಳ ವಿವರಗಳನ್ನು ಸಂಗ್ರಹಿಸಿದ ಬಳಿಕ ಕುಂಬಾರ್, ಮಹಾರಾಷ್ಟ್ರದ ಗಡಿಗ್ರಾಮಕ್ಕೆ ತೆರಳಿ, ನಕಲಿ ಹೆಸರಿನಲ್ಲಿ ಸಿಮ್ ಪಡೆದು ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದ. ಆತನಿಂದ 10 ಸಿಮ್‍ಗಳನ್ನು ಹಾಗೂ ಹಲವು ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕುಂಬಾರ ಎಸಿಬಿ ಡಿವೈಎಸ್ಪಿ ಎಂದು ಹೇಳಿಕೊಂಡು ದಿನಕ್ಕೆ 4-5 ಮಂದಿಗೆ ಕರೆ ಮಾಡುತ್ತಿದ್ದ ಎಂದು ವಿವರಿಸಿದ್ದಾರೆ.