ಚಿಕ್ಕಮಗಳೂರು: ಮತಾಂತರ ಆರೋಪ; ಬಜರಂಗದಳದಿಂದ ಹೊಟೇಲ್ ಮೇಲೆ ದಾಳಿ
ಚಿಕ್ಕಮಗಳೂರು: ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಖಾಸಗಿ ಹೊಟೇಲಿನ ಸಭಾಂಗಣದ ಮೇಲೆ ದಾಳಿ ನಡೆಸಿರುವ ಘಟನೆ ರವಿವಾರ ನಗರದಲ್ಲಿ ನಡೆದಿದೆ.
ನಗರದ ಬಾರ್ ಲೈನ್ ರಸ್ತೆಯಲ್ಲಿರು ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ.
ಚರ್ಚ್‌ವೊಂದರ ಪಾದ್ರಿಗಳು ಹಾಗೂ ನೂರಾರು ಜನರು ಸಭೆ ನಡೆಸುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಏಕಾಏಕಿ ದಾಳಿ ನಡೆಸಿದ್ದರಿಂದ ಅಲ್ಲಿದ್ದವರು ಗಾಬರಿಗೊಂಡಿದ್ದಾರೆ.
ಅನುಮತಿ ಇಲ್ಲದೆ ಸಭೆ ನಡೆಸಲಾಗುತ್ತಿದೆ, ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಬಜರಂಗದಳದ ಮುಖಂಡರು ಆರೋಪ ಮಾಡಿದ್ದಾರೆ.
ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿ, ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಏಕಾಏಕಿ ಒಳನುಗ್ಗಿದ ಬಜರಂಗದಳದ ಕಾರ್ಯಕರ್ತರು ಪಾದ್ರಿಯೊಬ್ಬರನ್ನು ಪ್ರಶ್ನಿಸಿ ಅಡ್ಡಿಪಡಿಸಿದ್ದಾರೆ. ಈ ವೇಳೆ ಕಾರ್ಯಕರ್ತರು ಹಾಗೂ ಸಭೆಯಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸಭೆಯಲ್ಲಿದ್ದ ಜನರು ಬಜರಂಗದಳದವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಿಸಲಾಗಿದೆ.