ಆರೆಸ್ಸೆಸ್ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ: ನಳಿನ್ ಕುಮಾರ್ ಕಟೀಲ್

Update: 2022-05-29 13:37 GMT

ತುಮಕೂರು: ಕಾಂಗ್ರೆಸ್ ಪಕ್ಷದ ಡಾ.ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಆಗಲು ಬಿಡಲಿಲ್ಲ. ಈಗ ಡಿ.ಕೆ.ಶಿವಕುಮಾರ್ ಅವರನ್ನು ಮುಗಿಸುವ ಪ್ರಯತ್ನಕ್ಕೆ ಕೈ ಹಾಕಿದ್ದೀರಿ. ಮುಖ್ಯಮಂತ್ರಿ ಕುರ್ಚಿಯ ಮೇಲೆ ಟವಲ್ ಹಾಕಿದ್ದೀರಿ. ಮುಂದೆ ನೀವು ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಾ ಪ್ರಹಾರ ನಡೆಸಿದರು.

ನಗರದಲ್ಲಿ ರವಿವಾರ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದಿಂದ ಹಮ್ಮಿಕೊಂಡಿದ್ದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ಜಾಮೀನಿನ ಮೇಲೆ ಹೊರಗಡೆಯಿದ್ದಾರೆ. ಕಳ್ಳರ ಸಂಘ ಇಟ್ಟುಕೊಂಡಿರುವ ಸಿದ್ದರಾಮಯ್ಯ ಅವರಿಗೆ ಆರೆಸ್ಸೆಸ್ ಬಗ್ಗೆ ಮಾತನಾಡುವ ನೈತಿಕತೆ, ಯೋಗ್ಯತೆಯಿಲ್ಲ ಎಂದು ಟೀಕಿಸಿದರು.

ನಿಮ್ಮನ್ನು ರಾಜಕೀಯದಲ್ಲಿ ಬೆಳೆಸಿದ ದೇವೇಗೌಡರನ್ನು ತುಳಿಯುವ ಕೆಲಸ ಮಾಡಿದೀರಿ. ನಿಮ್ಮಿಂದಾಗಿ ಕಾಂಗ್ರೆಸ್ ಮುಕ್ತ ಕರ್ನಾಟಕವಾಗಿದೆ ನಿಮಗೆ ಧನ್ಯವಾದಗಳು ಎಂದರು.

ಸಿದ್ದರಾಮಯ್ಯ ಅವರು ಹೆಸರು ಬದಲಾವಣೆ ಮಾಡಿಕೊಳ್ಳಬೇಕು. ರಾಮನಿಗೆ ಅವಮಾನ ಮಾಡಬೇಡಿ ಎಂದು ಹರಿಹಾಯ್ದರು.

ಕುರುಬ ಸಮುದಾಯದ ಬಗ್ಗೆಯೂ ನಿಮಗೆ ಕಾಳಜಿಯಿಲ್ಲ. ಅವರ ಬಗ್ಗೆ ಚಿಂತನೆ ಮಾಡಿಲ್ಲ. ಖರ್ಗೆ, ಪರಮೇಶ್ವರ ಅವರನ್ನು ಮುಗಿಸಿ ಪರಿಶಿಷ್ಟರಿಗೆ ಅನ್ಯಾಯ ಮಾಡಿದ್ದೀರಿ. ಟಿಪ್ಪು ಜಯಂತಿ ಮಾಡಿ ಹಿಂದೂ, ಮುಸ್ಲಿಮರು ಒಡೆದಾಡುವ ಹಾಗೆ ಮಾಡಿದ್ದೀರಿ ಎಂದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಶಾಪ ಕಾಂಗ್ರೆಸ್ ಪಕ್ಷಕ್ಕಿದೆ ಅದಕ್ಕಾಗಿ ಇಂದು 61 ಮಂದಿ ಮುಖಂಡರು ಪಕ್ಷ ಬಿಟ್ಟಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ಮೂರು ಸಾವಿರ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌ ಅತಿ ಹೆಚ್ಚು ಗೋ ಹತ್ಯೆಗಳು ಆಗಿದ್ದು ಸಿದ್ದರಾಮಯ್ಯ ಸರ್ಕಾರದಲ್ಲಿ. ಸಿದ್ದರಾಮಯ್ಯ ಗೋ ಹಂತಕರಿಗೆ ರಕ್ಷಣೆ ನೀಡಿದರು. ಅಲ್ಪಸಂಖ್ಯಾತರ ಮತ ಬ್ಯಾಂಕ್ ಗಾಗಿ ಟಿಪ್ಪು ಜಯಂತಿ ಮಾಡಿದರು ಎಂದು ಟೀಕಿಸಿದರು.

ದೇಶವನ್ನು ಮಾರಿದ್ದು ಕಾಂಗ್ರೆಸ್, ಅತಿಹೆಚ್ಚು ಭ್ರಷ್ಟಾಚಾರ ಆಗಿರುವುದು ಕಾಂಗ್ರೆಸ್ ಆಡಳಿತದ ಸಮಯದಲ್ಲಿ. ನಾಲ್ಕು ಲಕ್ಷ ಕೋಟಿ ಹಗರಣವಾಗಿದೆ.  ಸಂಕಷ್ಟದ ಸಮಯದಲ್ಲಿ ದೇಶವನ್ನು ರಕ್ಷಣೆ ಮಾಡಿದ್ದು ಆರೆಸ್ಸೆಸ್. ಸಮಾಜವಾದದ ಹೆಸರಲ್ಲಿ ರಾಜಕೀಯಕ್ಕೆ ಬಂದು, ಜಾತಿಯ ಹೆಸರಲ್ಲಿ ಸಮಾಜವನ್ನು ಹೊಡೆಯುವ ಕೆಲಸ ಮಾಡಿದ್ದೀರಿ ಎಂದರು.

ಸಿದ್ದರಾಮಯ್ಯ ಅವಧಿಯಲ್ಲಿ ಕೋಟಿ ಕೋಟಿ ಹಣ ಲೂಟಿಯಾಗಿದೆ. ವಿದ್ಯಾರ್ಥಿ ನಿಲಯದ ಹಣವನ್ನು ದಿಂಬುಗಳಲ್ಲಿಟ್ಟು ಲೂಟಿ ಮಾಡಿದವರು ನಿಮ್ಮ ಸರ್ಕಾರದ ಮಂತ್ರಿಗಳು ಎಂದು ಹರಿಹಾಯ್ದರು.

ಆರೆಸ್ಸೆಸ್ ರಾಜಕಾರಣ ಮಾಡುತ್ತಿಲ್ಲ. ರಾಷ್ಟ್ರ ನಿರ್ಮಾಣ ಮಾಡುತ್ತಿದೆ. ಎಲ್ಲ ಸಮುದಾಯದವರು ಆರೆಸ್ಸೆಸ್ ನಲ್ಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News