ಉತ್ತರ ಪ್ರದೇಶದಲ್ಲಿ ಬೀದರ್ ಪ್ರವಾಸಿಗರ ಬಸ್ ಅಪಘಾತ: ಸಂತ್ರಸ್ತರ ನೆರವಿಗೆ ಆದಿತ್ಯನಾಥ್ ಜೊತೆ ಸಿಎಂ ಬೊಮ್ಮಾಯಿ ಮಾತುಕತೆ

Update: 2022-05-29 13:55 GMT
ಆದಿತ್ಯನಾಥ್ 

ಬೆಂಗಳೂರು, ಮೇ 29: ‘ಅಯೋಧ್ಯೆ ಯಾತ್ರೆಗೆ ತೆರಳುತ್ತಿದ್ದ ಬೀದರ್ ಜಿಲ್ಲೆಯ ಪ್ರವಾಸಿಗರ ತಂಡದ ಮಿನಿ ಬಸ್ ಉತ್ತರ ಪ್ರದೇಶದ ಲಖೀಂಪುರ್ ಖೇರಿ ಬಳಿ ಅಪಘಾತ ಸಂಭವಿಸಿ ಒಂದೇ ಕುಟುಂಬದ ಏಳು ಜನರು ಮೃತಪಟ್ಟು 9 ಜನರು ಗಾಯಗೊಂಡಿರುವ ಘಟನೆ ಅತ್ಯಂತ ದುರದೃಷ್ಟಕರ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದಿಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ದೂರವಾಣಿ ಮೂಲಕ ಮೃತರ ಕುಟುಂಬಗಳಿಗೆ ಸಂತಾಪ ತಿಳಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ. ಅಪಘಾತ ಸಂಭವಿಸಿದ ಸ್ಥಳದಲ್ಲಿ ಜಿಲ್ಲಾಡಳಿತ ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ರಾಜ್ಯದ ಪ್ರವಾಸಿಗರ ಸುರಕ್ಷತೆ, ಅವರಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಕುರಿತಂತೆ ಈಗಾಗಲೇ ತಾವು ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ' ಎಂದು ಹೇಳಿದರು.

‘ಗಾಯಾಳುಗಳಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ಒದಗಿಸುವುದರ ಜೊತೆಗೆ ರಸ್ತೆ ಅಪಘಾತದಲ್ಲಿ ಅಸುನೀಗಿದವರ ಮೃತದೇಹಗಳನ್ನು ಕರ್ನಾಟಕ ರಾಜ್ಯಕ್ಕೆ ತರಲು ಅಗತ್ಯ ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ. ಈ ಕುರಿತು ಅಲ್ಲಿನ ಸಿಎಂ ಹಾಗೂ ಆಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News