ಹೆಡಗೆವಾರ್ ಸ್ವಾತಂತ್ರ್ಯ ಹೋರಾಟದ ಬಗ್ಗೆ ಇತಿಹಾಸದಲ್ಲಿ ನಾನು ಎಲ್ಲಿಯೂ ಓದಿಲ್ಲ: ಡಾ.ಜಿ.ಪರಮೇಶ್ವರ್

Update: 2022-05-29 14:07 GMT
ಡಾ.ಜಿ.ಪರಮೇಶ್ವರ್

ಬೆಂಗಳೂರು, ಮೇ 29: ‘ಆರೆಸ್ಸೆಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೆವಾರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದನ್ನು ನಾನು ಇತಿಹಾಸದಲ್ಲಿ ಎಲ್ಲಿಯೂ ನೋಡಿಲ್ಲ, ಓದಿಯೂ ಇಲ್ಲ' ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಹಾಲಿ ಶಾಸಕ ಡಾ.ಜಿ.ಪರಮೇಶ್ವರ್ ಅವರು ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪಠ್ಯ ಪುಸ್ತಕ ಪರಿಷ್ಕರಣೆ, ಆರ್ಯ ಅಥವಾ ದ್ರಾವಿಡ ಸೇರಿದಂತೆ ಯಾವುದೇ ವಿಚಾರಗಳ ಬಗ್ಗೆ ಯಾರೂ ಲಘುವಾಗಿ ಮಾತನಾಡುವುದು ಸಲ್ಲ. ನಮ್ಮ ಇತಿಹಾಸ, ಸ್ವಾತಂತ್ರ್ಯ ಹೋರಾಟಗಾರರು ಯಾರು ಎಂದು ಪ್ರಪಂಚಕ್ಕೆ ಗೊತ್ತು. ಇತ್ತೀಚಿನ ದಿನಗಳಲ್ಲಿ ಇತಿಹಾಸ ತಿರುಚುವಂತದ್ದು ನಡೆಯುತ್ತಿದೆ. ಆದರೆ, ಇತಿಹಾಸ ಬದಲಾಯಿಸುವ ಅವಶ್ಯಕತೆ ಇಲ್ಲ' ಎಂದು ನುಡಿದರು. 

ದಲಿತ ಸಿಎಂಗೆ ಅವಕಾಶ: ‘ಬಿಜೆಪಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ' ಎಂದು ಸ್ಪಷ್ಟವಾಗಿದೆ. ಆದರೆ, ನಮ್ಮ ಪಕ್ಷದ ವಿದ್ಯಮಾನಗಳ ಬಗ್ಗೆ ಬಿಜೆಪಿ ನಾಯಕರಿಗೆ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು ಬಿಜೆಪಿ ಬಗ್ಗೆ ಮಾತ್ರ. ಕಾಂಗ್ರೆಸ್ ಪಕ್ಷದಲ್ಲಿ ದಲಿತ ಮುಖ್ಯಮಂತ್ರಿಗೆ ಅವಕಾಶ ನೀಡಲಿದ್ದಾರೆಂಬುದು ನನ್ನ ಅನಿಸಿಕೆ' ಎಂದು ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.

‘ದಲಿತ ಮುಖ್ಯಮಂತ್ರಿ ಕನಸು ಕಾಣುವವರು ಹುಚ್ಚರು' ಎಂಬ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿಕೆಯಿಂದ ಬಿಜೆಪಿ ಪಕ್ಷದಲ್ಲಿ ದಲಿತ ವ್ಯಕ್ತಿಯನ್ನು ಸಿಎಂ ಮಾಡುವುದಿಲ್ಲ ಎಂಬುದು ಸ್ಪಷ್ಟ. ನಾರಾಯಣ ಸ್ವಾಮಿ, ನನ್ನ ಮತ್ತು ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಹೇಳಿದ್ದಾರೆ. ನಮ್ಮ ಪಕ್ಷದ ಬಗ್ಗೆ ಅವರಿಗೇನು ಗೊತ್ತು. ನಮ್ಮ ಪಕ್ಷದಲ್ಲಿ ಎಲ್ಲರಿಗೂ ಅವಕಾಶಗಳಿವೆ' ಎಂದು ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ಎಂಎಲ್‍ಸಿ ಗೆಲ್ಲಿಸಿದ್ದೇನೆ: ‘ನಾನು ಪಕ್ಷದ ಕಾರ್ಯಕ್ರಮಗಳಿಂದ ದೂರು ಉಳಿದಿಲ್ಲ. ನನಗೆ ಪಕ್ಷ ಅಥವಾ ನಾಯಕರ ಮೇಲಾಗಲಿ ಸಿಟ್ಟಿಲ್ಲ. ವೈಯಕ್ತಿಕ ಕಾರಣಗಳಿಂದ ಎರಡು-ಮೂರು ಕಾರ್ಯಕ್ರಮಗಳಿಗೆ ಹೋಗಿಲ್ಲ. ಅದನ್ನು ಬಿಟ್ಟು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೊನ್ನೆ ನಡೆದ ಸ್ಥಳೀಯ ಸಂಸ್ಥೆಗಳಿಂದ ನಡೆದ ಎಂಎಲ್‍ಸಿ ಚುನಾವಣೆಯಲ್ಲಿ ಜಿಲ್ಲೆಯನ್ನು ಸುತ್ತಾಡಿ ಅಭ್ಯರ್ಥಿ ಗೆಲ್ಲಿಸಿದ್ದೇವೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾಜ್ಯಮಟ್ಟದ ಕಾರ್ಯಕ್ರಮಗಳಿದ್ದಾಗ ಬರುತ್ತೇವೆ. ಕಾರ್ಯಕ್ರಮ ಇಲ್ಲದೆ ಇದ್ದಾಗ ಕ್ಷೇತ್ರ, ಜಿಲ್ಲೆಯಲ್ಲಿ ಇರುತ್ತೇನೆ. ಅದನ್ನು ಬಿಟ್ಟರೆ ಏನಿಲ್ಲ. ರಾಜಣ್ಣನವರ ಮೇಲೆ ಕೋಪ ಮಾಡಿಕೊಳ್ಳೋಕೆ ಏನಿದೆ?. ಸಿದ್ದರಾಮಯ್ಯ ಭೇಟಿಯಲ್ಲೂ ವಿಶೇಷತೆ ಏನೂ ಇಲ್ಲ. ಪಕ್ಷ ವಿಚಾರಗಳು, ನನ್ನ ಮತ್ತು ಅವರ ಸಂಬಂಧ ಹಳೆಯದು' ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

‘ಇತ್ತೀಚಿಗೆ ನಡೆದ ಚಟುವಟಿಕೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ರಾಜ್ಯಸಭೆ ಚುನಾವಣೆ ಬಗ್ಗೆ ಹೈಕಮಾಂಡ್ ಬಿಟ್ಟಿದ್ದೇವೆ. ಅಧ್ಯಕ್ಷರಿಗೆ ಜವಾಬ್ದಾರಿ ಕೊಡುವುದು ನಮ್ಮ ಸಂಪ್ರದಾಯ. ಹೆಚ್ಚುವರಿ ಅಭ್ಯರ್ಥಿ ಹಾಕುವ ಬಗ್ಗೆ ವಿಪಕ್ಷ ನಾಯಕರು ಹಾಗೂ ಪಕ್ಷದ ಅಧ್ಯಕ್ಷರ ತೀರ್ಮಾನ ಮಾಡುತ್ತಾರೆ' ಎಂದು ಡಾ.ಪರಮೇಶ್ವರ್ ಅವರು ಅಭಿಪ್ರಾಯಪಟ್ಟರು.

‘ಪಿಎಸ್ಸೈ ಲಂಚದ ಹಗರಣ' ಈಗ 50 ಕೋಟಿ ರೂ.ತಲುಪಿದೆ. ಸಂಪೂರ್ಣ ತನಿಖೆ ನಡೆದರೆ 100 ಕೋಟಿ ರೂ.ದಾಟಲಿದೆ. ‘ಭ್ರಷ್ಟಾಚಾರದ ಮಂಡಿ'ಯಲ್ಲಿ ರಾಜ್ಯದ ಯುವಕರ ಭವಿಷ್ಯ ಮಾರಾಟವಾಗುತ್ತಿದೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಭವಿಷ್ಯದ ಉಳಿವಿಗಾಗಿ ಶೇ.40ರಷ್ಟು ಕಮಿಷನ್ ಬೊಮ್ಮಾಯಿ ಸರಕಾರ ತೊಲಗಬೇಕು'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News