ಶೈಕ್ಷಣಿಕ ಘನತೆ ಉಳಿಯಬೇಕು, ವಿವಾದ ಅಂತ್ಯಗೊಳಿಸಲು ಸಿಎಂ ಮಧ್ಯಪ್ರವೇಶಿಸಬೇಕು: ಬರಗೂರು ರಾಮಚಂದ್ರಪ್ಪ

Update: 2022-05-29 15:09 GMT

ದಾವಣಗೆರೆ: ಶೈಕ್ಷಣಿಕ ಘನತೆ ಉಳಿಯಬೇಕು ಎಂಬುದು ನನ್ನ ಕಳಕಳಿಯಾಗಿದ್ದು, ಅದ್ದರಿಂದ ಈ ವಿವಾದಕ್ಕೆ ಅಂತ್ಯ ಕಾಣಿಸಲು ಮುಖ್ಯಮಂತ್ರಿಗಳು ಮಧ್ಯಪ್ರವೇಶ  ಮಾಡುವುದು ಅನಿವಾರ್ಯ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕ ಪರಿಷ್ಕರಣೆ ನಮ್ಮ ಕಾಲದಲ್ಲೂ ಆಗಿತ್ತು. ಅದು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು ಹಾಗು ಸಂವಿಧಾನದ ಆಶಯಗಳಿಗನುಗುಣವಾಗಿ ನಡೆದಿತ್ತು ಅದರೆ, ಏಕೆ ಸೇರಿಸಿದ್ದೇವೆ ಮತ್ತು ಏಕೆ ಬಿಟ್ಟಿದ್ದೇವೆ ಎಂಬುದಕ್ಕೆ ಕಾರಣ ನೀಡಿದ್ದೇವೆ. ಅದರೆ, ಈ ಬಾರಿ ಪಠ್ಯಪುಸ್ತಕ ಪರಿಷ್ಕರಣೆ ಆಗಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಪಠ್ಯಕ್ರಮ ಸಂವಿಧಾನ ಆಶಯಕ್ಕೆ ವಿರುದ್ದವಾಗಿ ರಚನೆ ಆಗಬಾರದು. ಅನೇಕ ಮುಖ್ಯಪಠ್ಯಗಳು ಕೈಬಿಟ್ಟಿರುವುದರಿಂದ ಕನ್ನಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಅಲ್ಲದೇ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದ ಬಗ್ಗೆ ಬೇಸರ ಉಂಟಾಗಬಾರದು. ಈ ನಿಟ್ಟಿನಲ್ಲಿ ವಿವಾದ ಬಗೆಹರಿಸಲು ಮುಖ್ಯಮಂತ್ರಿಗಳು ಕೂಲಂಕುಶ ಪರಿಶೀಲಿಸಿ ವಿವಾದಕ್ಕೆ ತೆರೆ ಎಳೆಯಬೇಕು. ಅದಕ್ಕಾಗಿ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಬೇಕೆಂದು ಹೇಳಿದರು.  

ನನ್ನ ಬಗ್ಗೆಯು ವೈಯಕ್ತಿಕವಾಗಿ ತೇಜೋವಧೆ ಮಾತುಗಳು ಬರುತ್ತಿವೆ. ನಾನು ಆ ಮಟ್ಟಕ್ಕೆ ಇಳಿಯುವುದಿಲ್ಲ. ಇದಕ್ಕೆ ಕರ್ನಾಟಕದ ಜನ ಉತ್ತರ ಕೊಡುತ್ತಾರೆ. ವಿವಾದದೊಳಗೆ ಕಲುಷಿತ ವಿಷಯಗಳ ಬಗ್ಗೆ ಉತ್ತರ ಕೊಡುವುದಿಲ್ಲ. ನನಗೆ ಕನ್ನಡ ಸಂವೇಧನೆ, ಮೌಲ್ಯ ಕಲಿಸಿದೆ ಅದರ ಪ್ರಕಾರ ನಡೆದುಕೊಳ್ಳುತ್ತೇನೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News