ದೇಶವನ್ನಾಳುತ್ತಿರುವ ಬಹುತೇಕರಿಗೆ ಅಪರಾಧ ಹಿನ್ನೆಲೆ: ನಾಗಮೋಹನ್ ದಾಸ್

Update: 2022-05-29 16:56 GMT
ನಾಗಮೋಹನ್ ದಾಸ್

ಬೆಂಗಳೂರು: ‘ಸದ್ಯ ದೇಶವನ್ನಾಳುತ್ತಿರುವ ಬಹುತೇಕ ಜನಪ್ರತಿನಿಧಿಗಳಿಗೆ ಅಪರಾಧದ ಹಿನ್ನೆಲೆ ಇದೆ' ಎಂದು ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ರವಿವಾರ ಇಲ್ಲಿನ ಗಾಂಧಿನಗರದ ಖಾಸಗಿ ಹೋಟೆಲ್‍ನಲ್ಲಿ ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘದ 8ನೇ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ‘ಅಪರಾಧ, ವಿವಿಧ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿರುವವರೇ ರಾಜಕೀಯ ಪ್ರವೇಶ ಮಾಡುತ್ತಿರುವುದು ಆತಂಕ ಹೆಚ್ಚಿಸಿದೆ. ಮತ್ತೊಂದೆಡೆ ನಾಲ್ಕನೆಯ ಮೂರರಷ್ಟು ಭಾಗ ಜನಪ್ರತಿನಿಧಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಹೀಗಿರುವಾಗ ಇವರಿಂದ ಸಂವಿಧಾನ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಸಾಧ್ಯವೇ?' ಎಂದು ಪ್ರಶ್ನೆ ಮಾಡಿದರು.

‘ಸಂವಿಧಾನದ ಮೌಲ್ಯ, ಆದರ್ಶಗಳನ್ನು ಪಾಲನೆ ಮಾಡಬೇಕಾದ ವ್ಯಕ್ತಿಗಳೇ, ಸಂವಿಧಾನ ಬದಲಾವಣೆ ಮಾಡಲು ಬಂದಿದ್ದೇವೆ ಎಂದು ಬಹಿರಂಗವಾಗಿಯೇ ಹೇಳುತ್ತಾರೆ ಎಂದ ಅವರು, ಇಂತಹವರ ಮಧ್ಯೆ ಸಂವಿಧಾನ ಉಳಿಸುವ, ಜಾರಿ ಮಾಡುವ ಕೆಲಸ ನಡೆಯಬೇಕು' ಎಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.

ಅಖಿಲ ಭಾರತ ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಮಿಶ್ರ ಮಾತನಾಡಿ, ‘ಸರಕಾರವು ವಿಮಾ ರಂಗದಲ್ಲಿ ಖಾಸಗಿಯವರಿಗೆ ಪ್ರವೇಶ ನೀಡಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದರು.

ಸಂಘದ ಮಾಜಿ ಅಧ್ಯಕ್ಷ ಅಮಾನುಲ್ಲಾ ಖಾನ್ ಮಾತನಾಡಿ, ‘ನಿವೃತ್ತಿ ವೇತನದ ಉನ್ನತೀಕರಣ, ಕೌಟುಂಬಿಕ ನಿವೃತ್ತಿ ವೇತನವನ್ನು ಶೇ.30ಕ್ಕೆ ಏರಿಸುವಂತೆ ಆಡಳಿತ ಮಂಡಳಿಯ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಬೇಕು' ಎಂದು ಸರಕಾರಕ್ಕೆ ಒತ್ತಾಯಿಸಿದರು. ಸಭೆಯಲ್ಲಿ ಸಂಘದ ಅಧ್ಯಕ್ಷ ಅಶೋಕ್ ತಿವಾರಿ,  ರಂಗಕರ್ಮಿ ಬಿ.ಸುರೇಶ್, ಪ್ರಧಾನ ಕಾರ್ಯದರ್ಶಿ ಟಿ.ಕೆ.ಚಕ್ರವರ್ತಿ ಸೇರಿದಂತೆ ಪ್ರಮುಖರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News