ದೇವನೂರು ವಿರುದ್ಧ ವ್ಯಂಗ್ಯ, ನಿಂದನೆ: ಇದು ಬ್ರಾಹ್ಮಣ್ಯ ಮನಸ್ಥಿತಿ ಎಂದ ಜನರು

Update: 2022-05-30 13:18 GMT
Photo: Faebook

ಬೆಂಗಳೂರು: ಕನ್ನಡ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಹಾಗೂ ಪರಿಷ್ಕೃತ ಪಠ್ಯ ಪುಸ್ತಕಗಳ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ  ಪಡೆಯುತ್ತಿದೆ. ಇದರ  ಬೆನ್ನಲ್ಲೇ  ಕನ್ನಡದ ಮಹತ್ವದ ಸಾಹಿತಿ, ಚಿಂತಕ  ದೇವನೂರು ಮಹಾದೇವ ಅವರು ಪಠ್ಯಪುಸ್ತಕಗಳಿಂದ ತಮ್ಮ ಪಠ್ಯಗಳನ್ನು ಕೈ ಬಿಡುವಂತೆ ಕೇಳಿಕೊಂಡಿದ್ದರು. ಈಗ ದೇವನೂರು ವಿರುದ್ಧವೇ ಬಲಪಂಥೀಯರು ವ್ಯಂಗ್ಯ, ನಿಂದನೆಯ ಅಪಪ್ರಚಾರ ಪ್ರಾರಂಭಿಸಿದ್ದಾರೆ.

 “ದೇವನೂರು ಮಹಾದೇವ ಪೆನ್ನಿಗೆ ನಿವೃತ್ತಿ ಕೊಟ್ಟು ಮೈಕ್‌ ಮುಂದೆ ನಿಂತಿದ್ದಾರೆ. ವಿಚಾರ ನಪುಂಸಕತೆ ಇರುವುದರಿಂದ ಬರವಣಿಗೆ ಬಿಟ್ಟು ಎಷ್ಟೋ ವರ್ಷಗಳಾದವು, ಇವರಲ್ಲಿ ವಿಚಾರ ಇಲ್ಲ ಬರೀ ಉಗುಳು ಮಾತ್ರ. ದೇವನೂರು ಮಹಾದೇವ 2014, 2019 ರಲ್ಲಿ ಮೈಸೂರಿನಲ್ಲಿ ನನ್ನ ವಿರುದ್ಧ ಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್‌ ಪ್ರಚಾರ ಊಹಾಪೋಹಗಳನ್ನು ಬಿಟ್ಟು ಮತ್ತೆ ಪೆನ್ನು ಕೈಗೆತ್ತಿಕೊಂಡು ಒಂದು ಅದ್ಭುತ ಕೃತಿಯನ್ನು ರಚನೆ ಮಾಡಲಿ” ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಪರೋಕ್ಷ ಸವಾಲು ಹಾಕಿದ್ದರು.

ಜಿ.ಬಿ ಹರೀಶ್‌ ಎಂಬ ಬರಹಗಾರರೊಬ್ಬರು ದೇವನೂರು ಮಹಾದೇವ ಅವರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ ಮಾಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಮಹಾದೇವ ಅವರ ಬಗ್ಗೆ ಜಿಬಿ ಹರೀಶ್‌  ಹಾಕಿರುವ ಪೋಸ್ಟ್‌ ಬ್ರಾಹ್ಮಣ್ಯ ಮನಸ್ಥಿತಿಯ  ಸಂಕೇತ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ದಶಕಗಳ ಹಿಂದೆ ಬರೆದ ಕುಸುಮಬಾಲೆಯ ಬಂಡವಾಳ ಮುಗಿದಿದೆ. ದೇವನೂರು ಹೊಸದೇನೂ ಬರೆಯದೇ ದೊಡ್ಡವರಾದರಲ್ಲ!?” ಎಂದು ಕುಹಕವಾಡಿ  ಜಿಬಿ ಹರೀಶ್‌ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ. ಜಿಬಿ ಹರೀಶ್ ಅವರ ಈ ಕುಹಕದ ಮಾತಿನ ಹಿಂದಿರುವುದು ಬ್ರಾಹ್ಮಣ್ಯದ ಶ್ರೇಷ್ಟತೆಯ ವ್ಯಸನವಲ್ಲದೇ ಬೇರೇನೂ ಅಲ್ಲ ಎಂದು ಹಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀಪಾದ ಹೆಗ್ಡೆ ಅವರು, “ಖಂಡಿ ಖಂಡಿ ಬರೆದು ಬಿಸಾಕಿದರೆ ಮಾತ್ರ ದೊಡ್ಡ ಸಾಹಿತಿಯಾಗುವುದಿಲ್ಲ. ದೇವನೂರು ಮಹಾದೇವ ಬರೆದದದ್ದು ಸಂಖ್ಯೆಯಲ್ಲಿ ಕಡಿಮೆ ಇದ್ದಿರಬಹುದು ಆದರೆ ಗುಣ ಮಟ್ಟದಲ್ಲಿ ಅಂತರಾಷ್ಟ್ರೀಯ ಮಟ್ಟದ ಯಾವ ಬರಹಗಾರರಿಗೂ ಅವರು ಕಡಿಮೆಯಿಲ್ಲ. ಸ್ವತಃ ಬರಹಗಾರನಾದ ಜಿ ಬಿ ಹರೀಶ್ ಎಂಬ ಬ್ರಾಹ್ಮಣ್ಯದ ಲೇಖಕ ದೇವನೂರರನ್ನು ಟೀಕಿಸುವಾಗ ಅವರ ಬರಹಗಳ ಗುಣಮಟ್ಟ ಯಾವುದು ಎನ್ನುವುದನ್ನು ಅರಿತು ನುಡಿಯ ಬೇಕಿತ್ತು. ಹೀಗೆ ಬರೆಯುವುದರಿಂದ ಇವನು ತಾನೊಬ್ಬ ಕಳಪೆ ಬರಹಗಾರ ಮಾತ್ರ ಅಲ್ಲ ಮಿದುಳಿನಲ್ಲಿ ಕೇವಲ ಕೊಳಕು ತುಂಬಿದ ಮನುಷ್ಯನೂ ಹೌದು ಎನ್ನುವುದನ್ನು ಸಾಬೀತು ಪಡಿಸಿದ್ದಾನೆ.” ಎಂದು ಬರೆದಿದ್ದಾರೆ.

ಈ ಕುರಿತು ಯುವ ಚಿಂತಕ ಕೀಲಾರ ನಾಗೇಗೌಡ ಅವರು ಪ್ರತಿಕ್ರಿಯಿಸಿದ್ದು, “ಅಮೆರಿಕದ Harper Lee ಅನ್ನುವ ಕಾದಂಬರಿಗಾರ್ತಿ ತನ್ನ ಜೀವಮಾನದಲ್ಲಿ ಬರೆದದ್ದು ಎರಡೇ ಕಾದಂಬರಿ. ಇವತ್ತಿಗೂ ಆ ಎರಡು ಕಾದಂಬರಿಗಳನ್ನು ಅಮೆರಿಕದ ಜನತೆ ಮಾತ್ರ ಅಲ್ಲ ಜಗತ್ತಿನ ಜನರು ಎದೆಗೆ ಅಪ್ಪಿಕೊಂಡು ಓದುತ್ತಿದ್ದಾರೆ. ಅಮೆರಿಕದ ಶಾಲೆಗಳಲ್ಲಿ ಇವಳ ಕಾದಂಬರಿ ಓದದೇ ಇರುವ ವಿದ್ಯಾರ್ಥಿಗಳು ಇಲ್ಲವೇ ಇಲ್ಲ. ಕರ್ನಾಟಕ ಅಲ್ಲ ಬಾರತದ ಮಟ್ಟಿಗೆ Harper Lee ಗಿಂತ ದೊಡ್ಡ ಲೇಖಕರು ಯಾರಾದರೂ ಇದ್ದರೆ ಅದು ದೇವನೂರ ಮಹಾದೇವ ರವರು. ದೇವನೂರ ಮಹಾದೇವರ ಕಾದಂಬರಿ ಮತ್ತು ಕತೆಗಳು ಯಾವತ್ತಿಗೂ ದೇಶ ಕಾಲ ಮೀರಿದ ಸಾರ್ವಕಾಲಿಕ ಸಾಹಿತ್ಯ ಕೃತಿಗಳು. ನಿಮ್ಮಂತಹವರು ಸಾಂಸ್ಕ್ರತಿಕ ವಲಯದ ಆಯಕಟ್ಟಿನ ಜಾಗದಲ್ಲಿ ಇರದೇ ಇದ್ದಿದ್ದರೆ ಇವತ್ತು ದೇವನೂರು ಮಹಾದೇವ ಅವರ ಸಾಹಿತ್ಯ, ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಆಗುತ್ತಿತ್ತು” ಎಂದು ಬರೆದಿದ್ದಾರೆ.

ಮುಂದುವರೆದು, “ನಿನ್ನೆ ಕುವೆಂಪು, ಇಂದು ದೇವನೂರು ಮಹಾದೇವ, ನಾಳೆ ಬರೆಯಲು ಓದಲು ಕಲಿತ ಎಲ್ಲಾ ಶೂದ್ರ-ದಲಿತ ಜನರೇ ಇವರ ಟಾರ್ಗೆಟ್. ಎಲ್ಲಿದೆ ಅಸ್ಪೃಶ್ಯತೆ, ಎಲ್ಲಿದೆ ಹೈರಾರ್ಕಿ ಎಂದು ಕೇಳುವವರು ಸಾಮಾಜಿಕ ಜಾಲತಾಣದಲ್ಲಿ ನೋಡಿ. ಕುವೆಂಪು ಬಗ್ಗೆ, ದೇವನೂರು ಮಹಾದೇವ ಬಗ್ಗೆ ಇರುವ ಉರಿಗೆ ಕಾರಣ ಇಷ್ಟೇ.. ಇಷ್ಟು ವರ್ಷಗಳಿಂದ ತಮ್ಮದೇ ಬೌದ್ದಿಕ ಜಗತ್ತು ಎಂದು ಹಾರಾಡುತ್ತಿದ್ದ ಇವರಿಗೆ, ಪ್ರತಿಕ್ರಾಂತಿಯಾಗಿ ಹೊಸಜಗತ್ತು ತಲೆ ಎತ್ತಿಸಿ ತೋರಿಸದರಲ್ಲ... ಅದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ” ಎಂದು ನಾಗೇಗೌಡ ಅವರು ಬರೆದಿದ್ದಾರೆ.

ದೇವನೂರು ಮಹಾದೇವ ಹಾಗೂ ಕುವೆಂಪುರನ್ನು ಹಿಯಾಳಿಸುತ್ತುರುವ ಬಗ್ಗೆ ಮಾಜಿ ಸಚಿವ ಹೆಚ್‌ ಸಿ ಮಹದೇವಪ್ಪ ಕೂಡಾ ಪ್ರತಿಕ್ರಿಯಿಸಿದ್ದು, “ಶೂದ್ರ ಸಮುದಾಯಗಳ ವೈಚಾರಿಕ ಪ್ರಜ್ಞೆಯನ್ನು ಗಟ್ಟಿಗೊಳಿಸಿದ ಕುವೆಂಪು ಅವರನ್ನು ಹೀಯಾಳಿಸುವ ಕೆಲಸ ಮಾಡುತ್ತಿರುವ ಬಿಜೆಪಿಗರು ಇದೀಗ ಸಾಹಿತಿ ದೇವನೂರು ಮಹಾದೇವ ಅವರ ಮೇಲೆಯೂ ವಿಷ ಕಾರುತ್ತಿದ್ದಾರೆ. ಕೆಳ ವರ್ಗಗಗಳ ಪರವಾದ ಮತ್ತು ಎಲ್ಲ ಮನುಷ್ಯರೂ ಸಮಾನರೆಂಬ ತಿಳುವಳಿಕೆಯನ್ನು ನೀಡಿದ ಕುವೆಂಪು ಮತ್ತು ದೇವನೂರು ಮಹಾದೇವ ಅಂತವರನ್ನು ಅಸಹನೆಯಿಂದ ಕಾಣುವಂತಹ ನೀಚ ಪ್ರವೃತ್ತಿಯನ್ನು ಮನುವಾದಿಗಳು ಹುಟ್ಟು ಹಾಕಲು ಯತ್ನಿಸುತ್ತಿರುವುದು ಖಂಡನಾರ್ಹವಾದ ಸಂಗತಿಯಾಗಿದೆ.ಇನ್ನು ಇದೇ ಸಂದರ್ಭದಲ್ಲಿ ಮನುವಾದಿಗಳ ಈ ಪ್ರಯತ್ನಕ್ಜೆ ಸ್ವಾಮೀಜಿಗಳ ಆದಿಯಾಗಿ ಬಹಳಷ್ಟು ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸುತ್ತಿದ್ದು ಕನ್ನಡ ನಾಡಿನ ವೈಚಾರಿಕ ಪ್ರಜ್ಞೆಯಾದ ಸಾಹಿತಿಗಳ ಪರವಾಗಿ ಹೋರಾಟ ಮಾಡುವ ಎಲ್ಲಾ ಜನರ ಮತ್ತು ಕನ್ನಡ ಮನಸ್ಸುಗಳಿಗೆ ನನ್ನ ಪೂರ್ಣ ಬೆಂಬಲವಿದೆ.” ಎಂದು ಬರೆದಿದ್ದಾರೆ.

ಈ ಚರ್ಚೆಯ ನಡುವೆ, ನಾಡಿನ ಹಿರಿಯ ಚಿಂತಕ, ಲೇಖಕ ಪ್ರೊ. ರಹಮತ್‌ ತರೀಕೆರೆ ಅವರೂ ಪ್ರತಿಕ್ರಿಯಿಸಿದ್ದು, “ಮತೀಯವಾದವು ಕೇವಲ ಕ್ರೈಸ್ತರ ಮುಸ್ಲಿಮರ ಕಮ್ಯುನಿಸ್ಟರ ಹಗೆತನ ಸಾಧಿಸುತ್ತದೆ ಎಂದೇ ಬಹಳ ಜನರ ಮುಗ್ಧ ನಂಬೋಣ. ಮೇಲುನೋಟಕ್ಕೆ‌ ಇದು ನಿಜ. ಆದರೆ,  ಆಳದಲ್ಲಿ ಮತ್ತು  ಗುಪ್ತವಾಗಿ ಅದು,  ಭಾರತ ದೇಶವು  ಸೃಷ್ಟಿಸಿದ ಅಪೂರ್ವ ಪ್ರತಿಭೆಗಳೂ  ಧೀಮಂತರೂ ಆದ   ಬಸವಣ್ಣ, ಅಕ್ಕ, ನಾರಾಯಣಗುರು, ಗಾಂಧಿ ಟಾಗೂರ್, ಅಂಬೇಡ್ಕರ್,  ಕುವೆಂಪು, ದೇವರಾಜ ಅರಸು, ನಂಜುಂಡಸ್ವಾಮಿ, ತೇಜಸ್ವಿ, ಲಂಕೇಶ್,  ಅನಂತಮೂರ್ತಿ, ಕಾರ್ನಾಡ, ಕಲಬುರ್ಗಿ, ಮೂರ್ತಿರಾವ್, ಸಾರಾ, ಶಂಕರಭಟ್, ದೇವನೂರು, ರಾಜಕುಮಾರ್ ಅವರಂಥವರನ್ನು ಕೂಡ ಇಷ್ಟಪಡುವುದಿಲ್ಲ.  ಈ ದಿಟವನ್ನು ಈಚಿನ ವರ್ಷಗಳಲ್ಲಿ ನಡೆದ ವಿವಾದ ಮತ್ತು ವಾಗ್ವಾದಗಳು  ಮನವರಿಕೆಗೊಳಿಸಿವೆ. ಪಠ್ಯಪುಸ್ತಕವಿರಲಿ, ಭಾರತೀಯ ಸಂಸ್ಕೃತಿಯ ಗ್ರಹಿಕೆಯಿರಲಿ, ತಮ್ಮ ಸಿದ್ಧಾಂತಕ್ಕೆ ಒಳಗಾಗದ ನಾಡಿನ ಶ್ರೇಷ್ಠ ಮನಸ್ಸುಗಳನ್ನೆಲ್ಲ ಬಾಹಿರಗೊಳಿಸುತ್ತ ಹೋದರೆ, ಕಡೆಗೆ ಉಳಿಯುವುದೇನು?” ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News