ಶ್ರವಣ ದೋಷ ಮುಕ್ತ ಕರ್ನಾಟಕ ಯೋಜನೆ: ಅನುಷ್ಠಾನಕ್ಕೆ ಸಚಿವ ಸಂಪುಟ ಒಪ್ಪಿಗೆ?

Update: 2022-05-30 18:36 GMT

ಬೆಂಗಳೂರು, ಮೇ 30: 2022-23ನೇ ಸಾಲಿನಲ್ಲಿ ‘ಶ್ರವಣದೋಷ ಮುಕ್ತ ಕರ್ನಾಟಕ ಯೋಜನೆ’ ಅನುಷ್ಠಾನಕ್ಕಾಗಿ ಶ್ರವಣದೋಷ ಫಲಾನುಭವಿಗಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸಾ ಸೇವೆಗಳು ಹಾಗೂ ಶ್ರವಣಯಂತ್ರ ಸಾಧನಗಳನ್ನು ಒದಗಿಸಲು ರಾಜ್ಯ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ.

ಅಲ್ಲದೆ, ಶಸ್ತ್ರ ಚಿಕಿತ್ಸೆಯ ನಂತರ ಒಂದು ವರ್ಷದ ಅವಧಿಯವರೆಗೆ ಭಾಷಾ ಚಿಕಿತ್ಸೆಯನ್ನು ನೀಡಲು ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಲಾಗಿದೆ. 

ಕರ್ನಾಟಕ ಗೆಜೆಟೆಡ್ ಪ್ರೊಬೇಷನರುಗಳು ನೇಮಕಾತಿ(ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ)(ತಿದ್ದುಪಡಿ)ನಿಯಮಗಳು, 2022ಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇದಲ್ಲದೆ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಮಾದಿನಾಳ್ ಹಾಗೂ ಇತರೆ 11 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಒಟ್ಟು ಮೊತ್ತ 18.85 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಲಾಗಿದೆ.

ಪುತ್ತೂರು ತಾಲೂಕು ಬನ್ನೂರಿನ ಆನೆಮಜಲು ಎಂಬಲ್ಲಿ 2ನೆ ಹಂತದ ನ್ಯಾಯಾಲಯ ಸಂಕೀರ್ಣ ಕಾಮಗಾರಿಯನ್ನು 26.90 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಇದಲ್ಲದೆ, ಮೇಕೆದಾಟು ಕುಡಿಯುವ ನೀರು ಯೋಜನೆಗೆ ಅನುಮೋದನೆ ಹಾಗೂ ಕಣಿವೆ ರಾಜ್ಯಗಳ ನ್ಯಾಯಸಮ್ಮತ ಪಾಲನ್ನು ನಿರ್ಧರಿಸುವವರೆಗೆ ಗೋದಾವರಿ-ಕೃಷ್ಣಾ-ಪೆನ್ನಾರ್-ಕಾವೇರಿ-ವೈಗೈ-ಗುಂಡಾರ್ ನದಿ ಜೋಡಣೆ ಯೋಜನೆಯ ಡಿಪಿಆರ್ ಅನ್ನು ಅನುಮೋದಿಸದಂತೆ ಕೇಂದ್ರ ಸರಕಾರವನ್ನು ಆಗ್ರಹಿಸುವ ಕುರಿತು ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಅಧಿಕೃತ ನಿರ್ಣಯವನ್ನು ಮಂಡಿಸಿರುವ ಕ್ರಮಕ್ಕೆ ಸಚಿವ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News