×
Ad

ಪಠ್ಯ ಪುಸ್ತಕಗಳಲ್ಲಿ ಕೇಸರೀಕರಣ: ತಮ್ಮ ಕವಿತೆ ಪ್ರಕಟಿಸುವ ಅನುಮತಿ ವಾಪಸ್ ಪಡೆದ ಮೂಡ್ನಾಕೂಡು ಚಿನ್ನಸ್ವಾಮಿ

Update: 2022-05-31 13:42 IST

ಬೆಂಗಳೂರು: ಪಠ್ಯ ಪುಸ್ತಕದಲ್ಲಿ ತಮ್ಮ ಕವಿತೆಯನ್ನು ಬೋಧಿಸಲು ನೀಡಿದ್ದ ಅನುಮತಿಯನ್ನು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರೂ ಕೂಡ ವಾಪಸ್ ಪಡೆದಿದ್ದಾರೆ.

ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಗೆ ಪತ್ರ ಬರೆದಿರುವ ಅವರು, 5ನೇ ತರಗತಿಗೆ ಪಠ್ಯವಾಗಿರುವ ''ನನ್ನ ಕವಿತೆಗೆ''ಎಂಬ ಕವಿತೆಗೆ ನೀಡಿರುವ ನನ್ನ ಅನುಮತಿಯನ್ನು ಹಿಂಪಡೆಯುತ್ತೇನೆ ಎಂದು ತಿಳಿಸಿದ್ದಾರೆ. 

''ರಾಜ್ಯ ಸರಕಾರವು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಮಿತಿಯನ್ನು ನೇಮಿಸಿ ಶಾಲಾ ಪಠ್ಯ ಪುಸ್ತಕಗಳಲ್ಲಿ ಕೇಸರೀಕರಣಗೊಳಿಸುತ್ತಿ ರುವ ಬಗ್ಗೆ ಕನ್ನಡ ಸಾರಸ್ವತ ಲೋಕ ವಿಚಲಿತಗೊಂಡಿದೆ. ಬಸವಣ್ಣನ ಕುರಿತು ತಪ್ಪು ಮಾಹಿತಿ ನೀಡುವುದು, ಮಹಾನ್ ದಾರ್ಶನಿಕ ಕವಿ ಕುವೆಂಪು ಅವರನ್ನು ಅವಮಾನಿಸುವುದು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮಾಡುವ ಅಪಚಾರ. ಜಾತಿ ವ್ಯವಸ್ಥೆಯಿಂದ ಕಲುಷಿತಗೊಂಡಿರುವ ನಮ್ಮ ಸಮಾಜವನ್ನು ಜಾತ್ಯತೀತತೆಯಿಂದ ಮಾತ್ರ ಸರಿಪಡಿಸಲು ಸಾಧ್ಯ'' ಎಂದು ಪತ್ರದಲ್ಲಿ ಹೇಳಿದ್ದಾರೆ. 

''ಸ್ವಸ್ಥ ಸಮಾಜಕ್ಕಾಗಿ ಮುಂದಿನ ಪೀಳಿಗೆಯನ್ನು ತಯಾರು ಮಾಡುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕ್ಷೇತ್ರ ಅನವಶ್ಯಕ ವಿದ್ಯಮಾನಗಳಿಂದ ದಾಳಿಗೊಳಗಾಗಿರುವುದು ವಿಷಾದನೀಯ. ಪ್ರಗತಿಪರತೆಯನ್ನು ಪ್ರತಿಪಾದಿಸುವವರನ್ನು ಎಡಪಂಥೀಯರು ಎಂದು ದೂರುವುದು, ದೂರಮಾಡುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ'' ಎಂದು ಮೂಡ್ನಾಕೂಡು ಚಿನ್ನಸ್ವಾಮಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ... ''ಪಠ್ಯದಲ್ಲಿ ನನ್ನ ಕವಿತೆ ಕೈಬಿಡಬೇಕು'': ಸಚಿವ ಬಿ.ಸಿ ನಾಗೇಶ್ ಗೆ ಪತ್ರ ಬರೆದ ಪ್ರೊ.ಎಸ್.ಜಿ.ಸಿದ್ದರಾಮಯ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News