ಮಂಡ್ಯ: ಮಗಳ ಮೃತದೇಹದ ಪಕ್ಕದಲ್ಲೇ 4 ದಿನ ಕಳೆದ ತಾಯಿ
ಮಂಡ್ಯ: ನಾಲ್ಕು ದಿನದಿಂದ ಮಗಳ ಮೃತದೇಹದ ಪಕ್ಕದಲ್ಲೇ ತಾಯಿ ಮಲಗಿರುವ ಘಟನೆ ಮಂಡ್ಯ ನಗರದ ಹಾಲಹಳ್ಳಿ ಬಡಾವಣೆಯ ಹೊಸ ತಮಿಳು ಕಾಲೋನಿಯಲ್ಲಿ ನಡೆದಿದೆ.
ಹಾಲಹಳ್ಳಿ ಬಡಾವಣೆಯ ರೂಪ(30) ನಾಲ್ಕು ದಿನಗಳ ಹಿಂದೆ ಮನೆಯಲ್ಲಿಯೇ ಸಾವನ್ನಪ್ಪಿದ್ದು, ಮಗಳ ಮೃತದೇಹದ ಮುಂದೆಯೇ ತಾಯಿ ನಾಗಮ್ಮ ಮಲಗಿದ್ದಾರೆ.
ಕೌಟುಂಬಿಕ ಕಲಹದಿಂದ 5 ವರ್ಷಗಳ ಹಿಂದೆ ಪತಿ ಮತ್ತು ಮಕ್ಕಳನ್ನು ಬಿಟ್ಟು ತಾಯಿ ನಾಗಮ್ಮ ಮನೆಯಲ್ಲಿ ರೂಪ ವಾಸವಾಗಿದ್ದರು. ನಾಲ್ಕು ದಿನಗಳಿಂದ ಇಡೀ ಬಡಾವಣೆಯಲ್ಲಿ ಕೊಳೆತ ವಾಸನೆ ಬರುತ್ತಿತ್ತು. ಸೋಮವಾರ ನಾಗಮ್ಮ ಮನೆಯಿಂದ ನೊಣಗಳು ಹಾರಾಡುವುದು ಹಾಗೂ ದುರ್ವಾಸನೆ ಬರುವುದು ಕಂಡು ಬಂದಿದೆ.
ನಂತರ ನಾಗಮ್ಮ ಮನೆಯ ಬಾಗಿಲನ್ನು ಹೊಡೆದು ನೋಡಿದಾಗ ರೂಪ ಶವ ಕೊಳೆತ ಸ್ಥಿತಿಯಲ್ಲಿದ್ದು, ಆ ಶವದ ಪಕ್ಕ ತಾಯಿ ನಾಗಮ್ಮ ಕುಳಿತಿರುವ ದೃಶ್ಯಕಂಡ ಜನರು ಬೆಚ್ಚಿ ಬಿದ್ದಿದ್ದಾರೆ. ಬಳಿಕ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ರೂಪ ಸಾವು ಸಹಜ: ಶವ ಪರೀಕ್ಷಾ ವರದಿ
ರೂಪ ಸಾವು ಸಹಜ ಸಾವು ಎಂದು ಶವದ ಪರೀಕ್ಷಾ ವರದಿ ಸ್ಪಷ್ಟಪಡಿಸಿದೆ. ಶವದ ಪಕ್ಕದಲ್ಲೇ ಕುಳಿತಿದ್ದ ಆಕೆಯ ತಾಯಿ ಮಾನಸಿಕ ಅಸ್ವಸ್ಥೆಯಾಗಿದ್ದರಿಂದ ಈ ವಿಚಾರವನ್ನು ಹೇಳಲಾಗಿಲ್ಲ ಎಂದು ಪಿಎಸ್ಸೈ ರಮೇಶ್ ತಿಳಿಸಿದ್ದಾರೆ.