×
Ad

ಸಚಿವ ಬಿ.ಸಿ ನಾಗೇಶ್ ಗೆ ಪತ್ರ; 'ಪಠ್ಯ ಕೈಬಿಡಿ' ಅಭಿಯಾನಕ್ಕೆ ಚಂದ್ರಶೇಖರ ತಾಳ್ಯ, ಲೇಖಕಿ ರೂಪ ಹಾಸನ ಸೇರ್ಪಡೆ

Update: 2022-05-31 19:12 IST
ಲೇಖಕಿ ರೂಪ ಹಾಸನ 

ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿ ಪಠ್ಯ ಕೋಮುವಾದೀಕರಣ ಮಾಡಿರುವುದನ್ನು ವಿರೋಧಿಸಿ ಪಠ್ಯ ಅನುಮತಿ ನಿರಾಕರಣೆ ಪರ್ವ ಮುಂದುವರೆದಿದೆ. ಹಿರಿಯ ಸಾಹಿತಿ ದೇವನೂರ ಮಹಾದೇವರಿಂದ ಆರಂಭಗೊಂಡ ನನ್ನ ಪಠ್ಯ ಕೈಬಿಡಿ ಹೋರಾಟಕ್ಕೆ ಚಂದ್ರಶೇಖರ ತಾಳ್ಯ, ಹಾಗೂ ಲೇಖಕಿ ರೂಪಾ ಹಾಸನ ಅವರು ಸೇರ್ಪಡೆಯಾಗಿದ್ದಾರೆ. 

ಈ ಸಂಬಂಧ ಚಂದ್ರಶೇಖರ ತಾಳ್ಯ ಹಾಗೂ ಲೇಖಕಿ ರೂಪಾ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಗೆ ಪತ್ರ ಬರೆದಿದ್ದಾರೆ. 

ಚಂದ್ರಶೇಖರ ತಾಳ್ಯ ಅವರು ತಮ್ಮ ಪತ್ರದಲ್ಲಿ “ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಶಿಕ್ಷಣ ಕ್ಷೇತ್ರದ ಮೇಲಿನ ಸಾಂಸ್ಕೃತಿಕ ಹಲ್ಲೆ ಮಿತಿ ಮೀರುತ್ತಿದೆ. ಅದೀಗ ಪಠ್ಯಕ್ರಮದ ಮೇಲೂ ತನ್ನ ಕರಿನೆರಳು ಚಾಚುತ್ತಿದೆ. ಅಸಾಂವಿಧಾನಿಕ ನಿರ್ಧಾರಗಳಿಂದ ಇಡೀ ಶೈಕ್ಷಣಿಕ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಅನೈತಿಕ ನಡೆ ನನ್ನಂಥ ಲೇಖಕನನ್ನು ಅಧೀರನನ್ನಾಗಿ ಮಾಡುತ್ತದೆ. ಇದು ಕನ್ನಡ ಪರಂಪರೆಯನ್ನು ಕುಬ್ಜಗೊಳಿಸುವ ಅಕ್ರಮ ನಡೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಪಠ್ಯ ಪರಿಷ್ಕರಣೆಯ ನೆಪದಲ್ಲಿ ನಡೆಯುತ್ತಿರುವ ಈ ಸಂಸ್ಕ್ರತಿ ತಿರುಚೀಕರಣ ನಮ್ಮ ಪರಂಪರಾಗತ ಸಂಸ್ಕೃತಿಯನ್ನೇ ವಿರೂಪಗೊಳಿಸವಂತಿಹುದು. ಇದನ್ನು ತಾವು ಗಮನಿಸಬೇಕು ಎನ್ನುವುದು ನನ್ನ ಆಗ್ರಹ” ಎಂದು ಅವರು ತಿಳಿಸಿದ್ದಾರೆ.

ರೂಪ ಹಾಸನ ಅವರ ಪತ್ರದ ಸಾರಾಂಶ

ಈ ವರ್ಷ ಶಾಲಾ ಪಠ್ಯಪುಸ್ತಕಗಳು ಆಳುವ ಪಕ್ಷದ ತತ್ವ, ಸಿದ್ಧಾಂತಕ್ಕೆ ಅನುಗುಣವಾಗಿ ಮರುಪರಿಷ್ಕರಣೆಗೊಂಡಿರುವುದು ಖೇದನೀಯ. ಅದನ್ನು ಈಗಾಗಲೇ ಕೆಲವು ಹಿರಿಯ ಗೌರವಾನ್ವಿತ ಸಾಹಿತಿಗಳು ಖಂಡಿಸಿ, ಪಠ್ಯದಲ್ಲಿ  ತಮ್ಮ ಬರಹವನ್ನು ಸೇರ್ಪಡೆಗೊಳಿಸಲು ಹಿಂದಿನ ಸಮಿತಿಗೆ ಕೊಟ್ಟ ಅನುಮತಿಯನ್ನು ಹಿಂಪಡೆಯುವ ಮೂಲಕ ತಮ್ಮ ನೈತಿಕ ಹಾಗೂ ಸಾತ್ವಿಕ ಪ್ರತಿರೋಧ ತೋರಿದ್ದಾರೆ. ಆದರೆ ಆದ ತಪ್ಪನ್ನು ಸರಿಪಡಿಸಿ, ತಕ್ಷಣವೇ ಕ್ರಮ ಕೈಗೊಳ್ಳಬೇಕಾದ ಸರ್ಕಾರ, ಈ ಕುರಿತು ನಿರ್ಲಕ್ಷ್ಯ ವಹಿಸಿರುವುದು ಹಾಗೂ ಸರ್ಕಾರದ ಜನಪ್ರತಿನಿಧಿಗಳಿಂದಲೇ ಅಂತಹ ಘನತೆಯುತ ಸಾಹಿತಿಗಳನ್ನು ಇನ್ನಷ್ಟು ಅವಮಾನಿಸುವ ಸಂಗತಿಗಳು ನಡೆಯುತ್ತಿರುವುದು ಖಂಡನೀಯ. ಜೊತೆಗೆ ಈಗಿನ ಮರು ಪಠ್ಯ ಪರಿಷ್ಕರಣಾ ಸಮಿತಿಯಲ್ಲಿ ಒಬ್ಬೇ ಒಬ್ಬ ಮಹಿಳಾ ಸದಸ್ಯರಿಲ್ಲದಿರುವುದು, ಹತ್ತನೆಯ ತರಗತಿಯ ಕನ್ನಡ ಪಠ್ಯದಲ್ಲಿ ಒಬ್ಬ ಮಹಿಳೆಯದೂ ಗದ್ಯ-ಪದ್ಯವಿಲ್ಲದಿರುವುದೂ, ಒಬ್ಬೇ ಒಬ್ಬ ಸಾಧಕಿಯ ಕುರಿತೂ ಪಠ್ಯವಿಲ್ಲದಿರುವುದೂ... ಸರ್ಕಾರ ಮಹಿಳಾ ಸಂಕುಲಕ್ಕೆ ಮಾಡಿದ ಅವಮಾನವೆಂಬುದು ನೋವಿನ ಸಂಗತಿಯಾಗಿದೆ.

ಮಕ್ಕಳು ಹಾಗೂ ಶೈಕ್ಷಣಿಕ ಹಕ್ಕುಗಳ ರಕ್ಷಣೆಗಾಗಿ ಕಳೆದೆರಡು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ನಾನು, ಪರಿಷ್ಕøತಗೊಂಡ ಶಾಲಾ ಪಠ್ಯ ಪುಸ್ತಕಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅವು ಮುಖ್ಯವಾಗಿ “ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005” ರ ನೀತಿ ನಿಯಮಗಳಿಗೆ ಅನುಗುಣವಾಗಿ ರೂಪಿತವಾಗಿಲ್ಲದಿರುವುದು ಎದ್ದು ಕಾಣುತ್ತಿದೆ. ಈ ಚೌಕಟ್ಟು ಸಂವಿಧಾನದ ಮೂಲತತ್ವಗಳಿಗೆ ಬದ್ಧವಾಗಿ ರೂಪುಗೊಂಡಿದೆ. ಪ್ರಜಾಪ್ರಭುತ್ವದ ಆಶಯಗಳನ್ನೊಳಗೊಂಡು ಸಮಾನತೆ, ಧರ್ಮನಿರಪೇಕ್ಷತೆ, ಲಿಂಗಸಮಾನತೆ, ಸಾಮಾಜಿಕ ನ್ಯಾಯ, ತಾರತಮ್ಯ ನಿರ್ಮೂಲನೆ, ಹಕ್ಕುಗಳ ಬಗ್ಗೆ ಗೌರವವನ್ನು ಪಠ್ಯದ ಆದ್ಯತೆಯಾಗಿ ಪರಿಗಣಿಸಬೇಕೆಂದು ಅದು ಘೋಷಿಸಿದೆ. ಹೀಗಾಗಿ ಮಗುವಿನ ಬುದ್ಧಿ ಮತ್ತು ಮನಸುಗಳು ನಮ್ಮ ಬಹುತ್ವ ಭಾರತದ ಬಹುಸಂಸದಕೃತಿಗಳ ಬಹು ಆಯಾಮಗಳನ್ನು ಒಳಗೊಳ್ಳುವಂತಿರಬೇಕು. ಪಠ್ಯಗಳು ವಿಶಾಲ, ಉದಾತ್ತ, ವೈಚಾರಿಕ, ವೈಜ್ಞಾನಿಕ, ಸಹಬಾಳ್ವೆ, ಸಾಮರಸ್ಯದ ಉದ್ದೇಶ ಹೊಂದಿರಬೇಕು. ಪ್ರತಿ ಮಗುವೂ ಪ್ರೀತಿ, ಅಹಿಂಸೆ ಮತ್ತು ಐಕ್ಯತೆದಿಂದ ಬೆಳೆಯುವಂತೆ, ಮುಕ್ತಚಿಂತನೆಯಿಂದ ಕೂಡಿದ ಸಮಚಿತ್ತದ ಪಠ್ಯವನ್ನು ರೂಪಿಸಲು ಆದ್ಯತೆ ನೀಡಬೇಕಿದ್ದುದು ಅತ್ಯಂತ ಮುಖ್ಯವಾಗಿತ್ತು. ಆದರೆ ಈ ಚೌಕಟ್ಟಿನ ಆಶಯಕ್ಕನುಗುಣವಾಗಿ ಮರು ಪರಿಷ್ಕರಣೆ ನಡೆದಿಲ್ಲದಿರುವುದು ಆತಂಕಕಾರಿಯಾಗಿದೆ.
   
 ಈ ಎಲ್ಲಾ ಕಾರಣಗಳಿಂದಾಗಿ ಒಂಬತ್ತನೆಯ ತರಗತಿ ತೃತೀಯ ಭಾಷಾ ಕನ್ನಡ ಪಠ್ಯಪುಸ್ತಕ ‘ನುಡಿಕನ್ನಡ’ ಪಠ್ಯದಲ್ಲಿ ಅಳವಡಿಕೆಯಾಗಿದ್ದ ನನ್ನ “ಅಮ್ಮನಾಗುವುದೆಂದರೆ” ಕವಿತೆಯನ್ನು ಬೋಧಿಸಲು ಹಿಂದಿನ ಸಮಿತಿಗೆ ನೀಡಿದ್ದ ಅನುಮತಿಯನ್ನು ಈ ಮೂಲಕ ಹಿಂಪಡೆಯುತ್ತಿದ್ದು, ಇದನ್ನು ನಿಮ್ಮ ಗಮನಕ್ಕೆ ತರುತ್ತಿರುವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News