ಜನ ಬೀದಿಗಿಳಿಯುವ ಮುನ್ನ ಎಚ್ಚೆತ್ತುಕೊಳ್ಳಬೇಕು: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ

Update: 2022-05-31 13:54 GMT

ಬೆಂಗಳೂರು, ಮೇ 31: ‘ಪಠ್ಯ ಪುಸ್ತಕಗಳಿಂದ ಕುವೆಂಪು, ನಾರಾಯಣಗುರು ವಿಚಾರಗಳನ್ನು ಕೈಬಿಟ್ಟು ಬಿಜೆಪಿ ಸರಕಾರದವರು ಇನ್ಯಾವ ಸಮಾಜ ಕಟ್ಟಲಿಕ್ಕೆ ಹೊರಟಿದ್ದಾರೆಯೋ ತಿಳಿಯದು. ಇದು ನಮ್ಮ ಚರಿತ್ರೆಗೆ ಮಾರಕ. ರಾಜ್ಯದ ಜನ ಬೀದಿಗಿಳಿಯುವ ಮುನ್ನ ಎಚ್ಚೆತ್ತುಕೊಳ್ಳಬೇಕು' ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಎಚ್ಚರಿಸಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪಠ್ಯ ಪುಸ್ತಕದಲ್ಲಿ ಮಕ್ಕಳಿಗೆ ದಾರಿದೀಪ ಆಗುವ ವಿಚಾರ ಸೇರಿಸಿ, ನೈತಿಕ ಶಿಕ್ಷಣವನ್ನ ಕೊಡಬೇಕು. ಅದನ್ನು ಬಿಟ್ಟು ಸಮಾಜ ಒಡೆಯವ, ಜಾತಿ ಬೆಂಬಲಿಸುವ ಪಾಠ ಸೇರಿಸಬಾರದು. ಕೂಡಲೇ ಪಠ್ಯ ಪುಸ್ತಕದ ಗೊಂದಲ ಸರಿಪಡಿಸಬೇಕು. ಜೊತೆಗೆ ಉತ್ತಮ ಪಠ್ಯಗಳನ್ನ ಸೇರಿಸಬೇಕು' ಎಂದು ಸಲಹೆ ನೀಡಿದರು.

‘ಇದು ರಾಜ್ಯದ ದುರ್ದೈವ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪಠ್ಯ ಪುಸಕ್ತಕ ಗೊಂದಲ ಸೃಷ್ಟಿಯಾಗಿದೆ. ನೈತಿಕತೆಯನ್ನ ಕೆದಕುವ ಪ್ರಯತ್ನ ನಡೆದಿದೆ. ದೊಡ್ಡ ಸಾಹಿತಿಗಳ ವಿಚಾರವನ್ನ ಪಠ್ಯದಿಂದಲೇ ತೆಗೆದುಹಾಕುತ್ತಿದ್ದಾರೆ. ಚಾರಿತ್ರಿಕ ವಿಷಯಗಳನ್ನೇ ತಿರುಚಲಾಗುತ್ತಿದೆ. ವಿದ್ಯಾರ್ಥಿಗಳನ್ನ ಭವಿಷ್ಯದ ನಾಯಕರನ್ನಾಗಿಸಬೇಕಿತ್ತು. ಅದರ ಬದಲಿಗೆ ನಮ್ಮ ಬಹುತ್ವ ಸಂಸ್ಕೃತಿಗೆ ಹೊಡೆತ ಕೊಡುತ್ತಿರುವುದಲ್ಲದೆ, ಪ್ರಜಾಪ್ರಭುತ್ವ ಕತ್ತನ್ನ ಹಿಸುಕುವ ಕೆಲಸಕ್ಕೆ ಬಿಜೆಪಿ ಕೈಹಾಕಿದೆ ಎಂದು ಮಹದೇವಪ್ಪ ಟೀಕಿಸಿದರು.

‘ಹಿರಿಯ ಸಾಹಿತಿಗಳಾದ ದೇವನೂರ ಮಹಾದೇವ, ಜಿ.ರಾಮಕೃಷ್ಣ, ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸೇರಿದಂತೆ ಒಬ್ಬೊಬ್ಬೆ ಸಾಹಿತಿಗಳು ಇವತ್ತು ನಮ್ಮ ಪಾಠವನ್ನು ಪಠ್ಯ ಪುಸ್ತಕದಲ್ಲಿ ಸೇರಿಸಬೇಡಿ ಎನ್ನುತ್ತಿದ್ದಾರೆ' ಎಂದ ಮಹದೇವಪ್ಪ, ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರನ್ನ ಹೆಚ್ಚು ಬಿಂಬಿಸುತ್ತಿದ್ದಾರೆ. ಆದರೆ ಈತ ಹಿಂದೆಯೇ ನಾಡಗೀತೆಗೆ ಅವಮಾನ ಮಾಡಿದ ವ್ಯಕ್ತಿ. ಅವರನ್ನ ಆಗಲೇ ಬಂಧಿಸಬೇಕಿತ್ತು. ಇದೀಗ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಿಂದ ಚಕ್ರತೀರ್ಥರನ್ನ ಕೆಳಗಿಳಿಸಬೇಕು. ಪಠ್ಯ ಪುಸ್ತಕಗಳನ್ನು ಈ ಹಿಂದೆ ಇರುವಂತೆ ಯಥಾವತ್ ಮುಂದುವರಿಸಬೇಕು' ಎಂದು ಆಗ್ರಹಿಸಿದರು.

ಸಂಸದ ಪ್ರತಾಪ ಸಿಂಹಗೆ ಇವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ. ತಮಗೆ ಬಹುಮತ ಇದೇ ಎಂದು ಏನೂ ಬೇಕಾದರೂ ಮಾತನಾಡಲು ಬರುವುದಿಲ್ಲ. ಬಿಜೆಪಿಯಲ್ಲಿ ಪಕ್ಷವನ್ನು ಕಟ್ಟಿದವರನ್ನು ಮೂಲೆಗುಂಪು ಮಾಡಲಾಗಿದೆ. ಬಿಜೆಪಿ ಪ್ರಧಾನ ಕಾರ್ಯದಶಿ ಸಿ.ಟಿ.ರವಿ ಅವರು ಮನಸೋ ಇಚ್ಛೆ ಮಾತನಾಡುತ್ತಿದ್ದಾರೆಂದು ಅವರು ಟೀಕಿಸಿದರು.

‘ಪಠ್ಯ ಪುಸ್ತಕಗಳನ್ನು ತಿರುಚುವ ಮೂಲಕ ಬಿಜೆಪಿ ತಪ್ಪು ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್, ಕುವೆಂಪು ಅವರನ್ನು ಅವಹೇಳನ ಮಾಡಿದರು. ಇದೀಗ ವಿಶ್ವಗುರು ಬಸವಣ್ಣನವರ ಪಾಠ ಕೈಬಿಡುತ್ತಿದ್ದಾರೆ. ಇತಿಹಾಸವನ್ನ ತಿರುಚುವ ಕೆಲಸ ಬಿಜೆಪಿ ಮಾಡುತ್ತಿದೆ. ಇದನ್ನ ಕೂಡಲೇ ಸರಿಪಡಿಸದಿದ್ದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ'

-ಈಶ್ವರ್ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News