×
Ad

ಟಿಕಾಯತ್ ಮೇಲಿನ ಹಲ್ಲೆ ಖಂಡಿಸಿ ಕೊಲ್ಲಾಪುರದಲ್ಲಿ ರೈತರ ಪ್ರತಿಭಟನೆ

Update: 2022-05-31 22:36 IST

ಬೆಂಗಳೂರು, ಮೇ 31: ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಯುವ ವೇಳೆ ಕಪ್ಪು ಮಸಿ ಎರಚಿ, ಹಲ್ಲೆಗೆ ಯತ್ನಿಸಿರುವ ಘಟನೆಯನ್ನು ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಶಾಹು ಮಹಾರಾಜ್ ವೃತ್ತದಲ್ಲಿ ರಾಜ್ಯದ ರೈತರು ಹಾಗೂ ರೈತ ಮಹಿಳೆಯರು ಕಪ್ಪು ಪಟ್ಟಿ ಧರಿಸಿ ರಾಜಕೀಯ ಪ್ರಚೋದಿತ ಗೂಂಡಾಗಳಿಗೆ ಧಿಕ್ಕಾರ, ರೈತ ಹೋರಾಟಕ್ಕೆ ಜಯವಾಗಲಿ, ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕುರುಬೂರು ಶಾಂತಕುಮಾರ್, ಗೂಂಡಾಗಳ ಮೂಲಕ ರಾಜಕೀಯ ಪಕ್ಷದ ಮುಖಂಡರು ರೈತ ಮುಖಂಡರನ್ನ ಬಗ್ಗುಬಡಿಯಲು ಯತ್ನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಕೇಂದ್ರ ಸರಕಾರ ಕೃಷಿ ಕಾಯ್ದೆ ಹಿಂಪಡೆದ ಅವಮಾನವನ್ನು ಸಹಿಸಲಾಗದೆ ಇಂತಹ ವಾಮಮಾರ್ಗದ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.

ರಾಜ್ಯದ ರೈತರು ಸುಮ್ಮನೆ ಕೂರಲು ಸಾಧ್ಯವಿಲ್ಲ. ತಕ್ಷಣವೇ ರಾಜ್ಯ ಸರಕಾರ ಈ ಘಟನೆ ಸಂಬಂಧ ತನ್ನ ನಿರ್ಧಾರ ತಿಳಿಸಬೇಕು ಎಂದು ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಸುರೇಶ್ ಪಾಟೀಲ್, ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಗುರುಸಿದ್ದಪ್ಪ, ಮೋಹನ್ ಪಂಡಿತ್, ಎಸ್.ಪಿ.ಸಿದ್ನಾಳ, ಬರಡನಪುರ ನಾಗರಾಜ್, ಶಿವಮೂರ್ತಿ, ಸಿದ್ದೇಶ್, ಪದ್ಮಾ ಗೌರಿಶಂಕರ, ಗುರುಸ್ವಾಮಿ, ಮುಂತಾದವರಿದ್ದರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News