ಔರಂಗಜೇಬನಿಗೂ ಈಗಿರುವ ಮುಸ್ಲಿಮರಿಗೆ ಯಾವುದೇ ಸಂಬಂಧ ಇಲ್ಲ: ಮಾಜಿ ಸಚಿವ ಈಶ್ವರಪ್ಪ

Update: 2022-05-31 17:42 GMT

ಶಿವಮೊಗ್ಗ, ಮೇ.31: ಮಸೀದಿಯ ಒಂದು ಹಿಡಿ ಮಣ್ಣು ತೆಗೆಯಲು ಬಿಡುವುದಿಲ್ಲ ಎನ್ನುವುದು ದೇಶದ್ರೋಹ ಹೇಳಿಕೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರು ಮಸೀದಿ ದೇಗುಲ-ವಿವಾದದ ಕುರಿತು ಮಾತನಾಡಿ, ಅಲ್ಲಿ ಮೇಲ್ನೋಟಕ್ಕೆ ದೇವಸ್ಥಾನ ಇರುವುದು ಕಾಣುತ್ತಿದೆ. ದೇವಸ್ಥಾನ ಧ್ವಂಸ ಮಾಡಿ ಮಸೀದಿ ಕಟ್ಟಿರುವ ಜಾಗ. ಅಲ್ಲಿ ಮತ್ತೆ ದೇವಸ್ಥಾನ ಕಟ್ಟಲು ಮುಸ್ಲಿಮರು ಬೆಂಬಲ ನೀಡಬೇಕು. ಹಿಂದೂ-ಮುಸ್ಲಿಮರು ದೂರ ಇರಬೇಕು ಎನ್ನುವುದೇ ಡಿಕೆಶಿ ಮತ್ತು ಸಿದ್ದು ಅಪೇಕ್ಷೆಯಾಗಿದೆ. ಕೋಮು ಸೌಹಾರ್ದತೆಯಿಂದ ಇರಲು ಕಾಂಗ್ರೆಸ್ ಪಕ್ಷ ಬಿಡುತ್ತಿಲ್ಲ. ಇದನ್ನು ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕು. ಮೋದಿ ಬಂದ ಬಳಿಕ 75 ವರ್ಷದ ನಂತರ ಈಗ ದೇಶದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ ಆಗುತ್ತಿದೆ. ಮತ್ತೆ ಎಲ್ಲ ದೇವಸ್ಥಾನ ಹಿಂದೂಗಳ ಕೈಗೆ ಬರುವ ವಿಶ್ವಾಸ ಇದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ನಾಯಕರಿಂದ ಹಿಂದುತ್ವ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಡಿಕೆಶಿ ಮತ್ತು ಸಿದ್ದರಾಮಯ್ಯ ವಿರುದ್ಧ  ವಾಗ್ದಾಳಿ ನಡೆಸಿದ ಅವರು, ಮೊಘಲ್‌ರಿಂದ ಹಿಂದೂ ದೇಗುಲಗಳು ಧ್ವಂಸವಾಗಿವೆ. ಪುರಿ ಜಗನ್ನಾಥ್, ಅಯೋಧ್ಯೆ ರಾಮ ಮಂದಿರ, ಕಾಶಿ ವಿಶ್ವನಾಥ, ಮಥುರದ ಶ್ರೀಕೃಷ್ಣ ದೇವಸ್ಥಾನ ಸೇರಿದಂತೆ ದೇಶದಲ್ಲಿ 36 ಸಾವಿರ ದೇಗುಲ ಒಡೆದು ಮಸೀದಿ ನಿರ್ಮಾಣ ಮಾಡಲಾಗಿದೆ. ದೇವಸ್ಥಾನ, ಧಾರ್ಮಿಕ ಆಚರಣೆಯಿಂದ ಹಿಂದೂಗಳಲ್ಲಿ ಒಗ್ಗಟ್ಟು ಇರಲಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿನ ದೇಗುಲ ಧ್ವಂಸ ಮಾಡಲಾಗಿದೆ ಎಂದರು.

ಈಗಿನ ಮುಸ್ಲಿಮರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಔರಂಗಜೇಬನಿಗೂ ಈಗಿರುವ ಮುಸ್ಲಿಮರಿಗೆ ಯಾವುದೇ ಸಂಬಂಧ ಇಲ್ಲ. ದೇಶದ ಅನ್ನ, ನೀರು, ಗಾಳಿ ಸೇವಿಸಿದ ಮುಸ್ಲಿಮರಲ್ಲಿ ಅನೇಕರು ಭಾರತಾಂಬೆ ಮಕ್ಕಳು ಅಂತ ಹೇಳುವರು ಇದ್ದಾರೆ. ಇವರು ಈ ದಾಳಿಕೋರರ ಸಂಚಿಗೆ ಬಲಿಯಾಗಬಾರದು. ಒಂದೊಂದು ಮಸೀದಿ ತೆಗೆದಾಗ ಹಿಂದೂ ದೇಗುಲ ಪತ್ತೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಯ ಮುಸ್ಲಿಮರು ಈ ವಿಚಾರಕ್ಕೆ ತಲೆಕೆಡಿಸಿಕೊಳ್ಳಬಾರದು. ಹಿಂದೂ-ಮುಸ್ಲಿಂ ಒಂದೇ ಎನ್ನುವ ರೀತಿಯಲ್ಲಿ ಒಟ್ಟಾಗಿ ಬಾಳಬೇಕು. ಹೊಸದಾಗಿ ಕಟ್ಟಿರುವ ಮಸೀದಿಗಳಲ್ಲಿ ನಮಾಜ್ ಮಾಡಲಿ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News