ಕನ್ನಡ ಧ್ವಜ, ನಾಡಗೀತೆಗೆ ಅವಮಾನ: ರೋಹಿತ್‌ ಚಕ್ರತೀರ್ಥ ಗಡಿಪಾರಿಗೆ ಆಗ್ರಹಿಸಿ ಟ್ವಿಟರ್ ನಲ್ಲಿ #ನಾಡದ್ರೋಹಿ ಅಭಿಯಾನ

Update: 2022-06-01 03:52 GMT

ಬೆಂಗಳೂರು: ಕನ್ನಡ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಮೇಲ್ಜಾತಿಗಳಿಂದ ತುಂಬಿದ್ದು ಪಠ್ಯಗಳನ್ನು ಕೇಸರೀಕರಣಗೊಳಿಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಕನ್ನಡದ ಖ್ಯಾತ ಲೇಖಕರು ಸಾಹಿತಿಗಳು ಪಠ್ಯಗಳಿಂದ ತಮ್ಮ ಪಾಠಗಳನ್ನು ಕೈ ಬಿಡುವಂತೆ ಆಗ್ರಹಿಸಿದ್ದರು.  ಇದೀಗ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್‌ ಚಕ್ರತೀರ್ಥಗೆ ನಾಡದ್ರೋಹಿ ಎಂದು ಕರೆದು ಕನ್ನಡಿಗರು ಟ್ವಿಟರಿನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  

  ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಈ ಹಿಂದೆ, ಕುವೆಂಪು, ದೇವನೂರು ಮಹಾದೇವ ಸೇರಿದಂತೆ ಕನ್ನಡ, ನಾಡ ಧ್ವಜ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವುದು ಮತ್ತೆ ಮುನ್ನಲೆಗೆ ಬಂದಿದ್ದು, ಸಹಜವಾಗಿ ಚಕ್ರತೀರ್ಥ ವಿರುದ್ಧ ಆಕ್ರೋಶ ಬುಗಿಲೇಳುವಂತೆ ಮಾಡಿದೆ. ಇಂತಹ ವ್ಯಕ್ತಿಯೊಬ್ಬನಿಗೆ   ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ನೇತೃತ್ವ ವಹಿಸಿರುವ ಕರ್ನಾಟಕ ಸರ್ಕಾರದ ಬಗ್ಗೆಯೂ ಅಪಸ್ವರ ಎದ್ದಿದೆ. ಕನ್ನಡದ ಪ್ರಮುಖ ಜಾತಿ ಮಠಾಧೀಶರುಗಳು ಈ ಕುರಿತು ಮಾತನಾಡಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಈ ನಡುವೆ, ರೋಹಿತ್‌ ಚಕ್ರತೀರ್ಥರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ #ನಾಡದ್ರೋಹಿ ಹ್ಯಾಷ್‌ಟ್ಯಾಗ್‌ ಅನ್ನು ಟ್ವಿಟರಿನಲ್ಲಿ ಟ್ರೆಂಡ್‌ ಮಾಡಲಾಗಿದೆ. ಹಲವಾರು ಕನ್ನಡಿಗರು ಈ ಅಭಿಯಾನದಲ್ಲಿ ಭಾಗಿಯಾಗಿದ್ದು, ಪಠ್ಯ ವಿವಾದ ಸೇರಿದಂತೆ, ಕನ್ನಡದ ಅಸ್ಮಿತೆಗಳನ್ನು ಅವಮಾನಿಸಿದ್ದರೆನ್ನಲಾದ ರೋಹಿತ್‌ ಚಕ್ರತೀರ್ಥ ಅವರ ಸಮಿತಿಯನ್ನು ವಿಸರ್ಜಿಸಿ, ಪಠ್ಯಗಳನ್ನು ಹಿಂದಿನಂತೆಯೇ ಮುಂದುವರೆಸುವಂತೆ ಹಾಗೂ ಚಕ್ರತೀರ್ಥರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದ್ದಾರೆ.

“ಆತನ ಭಾಷೆ ಅಗ್ಗವಾಗಿದೆ, ಆಲೋಚನೆಗಳು ವಿಕೃತವಾಗಿವೆ, ಎರಡೂ ಆತನ ಅಂಕಣಗಳಲ್ಲಿ ಪ್ರತಿಫಲಿಸುತ್ತದೆ!! ಅಂತಹ ನಾಚಿಕೆಯಿಲ್ಲದ ವ್ಯಕ್ತಿಯು ಶಾಲೆಯ ಪಠ್ಯಕ್ರಮದ ವಿಷಯವನ್ನು ನಿರ್ಧರಿಸುವ ಸಮಿತಿಯ ಮುಖ್ಯಸ್ಥರಾಗಿದ್ದಾರೆ !! ಕುವೆಂಪು ಮತ್ತು ಕರ್ನಾಟಕ ನಾಡಗೀತೆಯನ್ನು ಅವಮಾನಿಸಿದ ವ್ಯಕ್ತಿ ಕಂಬಿ ಹಿಂದೆ ಇಲ್ಲವೇ?” ಎಂದು ಅಮೃತ್‌ ಶೆಣೈ ಟ್ವೀಟ್‌ ಮಾಡಿದ್ದಾರೆ.

“ಹೆಚ್ಚಿನ ಲೇಖಕರು ತಮ್ಮ ಪಠ್ಯಗಳನ್ನು ಬಳಸಲು ಅನುಮತಿಯನ್ನು ಹಿಂಪಡೆದಿದ್ದಾರೆ. ಕರ್ನಾಟಕದ ಶಿಕ್ಷಣ ವ್ಯವಸ್ಥೆ ಇಂತಹ ಬಿಕ್ಕಟ್ಟನ್ನು ಕಂಡಿರಲಿಲ್ಲ” ಎಂದು ವಿನಯ ಶ್ರೀನಿವಾಸ ಪ್ರತಿಕ್ರಿಯಿಸಿದ್ದಾರೆ.

“ರೋಹಿತ್‌ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಪಠ್ಯ ಪುಸ್ತಕಗಳ ಪುನರ್ ಪರಿಶೀಲನಾ ಸಮಿತಿಯು ಪ್ರಸ್ತಾಪಿಸಿದ ಪಾಠ ಬದಲಾವಣೆಯ ಶಿಫಾರಸ್ಸುಗಳನ್ನು ತಿರಸ್ಕರಿಸಬೇಕು ಹಾಗೂ ಸಮಿತಿಯನ್ನು ರದ್ದುಪಡಿಸಬೇಕು.” ಎಂದು ಆದರ್ಶ ಹುಂಚದಕಟ್ಟೆ ಟ್ವೀಟ್‌ ಮಾಡಿದ್ದಾರೆ.

ಈ ಕುರಿತ ಇನ್ನಷ್ಟು ಟ್ವೀಟ್‌ಗಳು ಇಲ್ಲಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News