ಪಠ್ಯ ಪುಸ್ತಕಗಳಲ್ಲಿ ವ್ಯತ್ಯಾಸಗಳಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ನಾವು ಸಿದ್ಧರಿದ್ದೇವೆ: ಡಿ.ವಿ.ಸದಾನಂದಗೌಡ

Update: 2022-06-01 07:20 GMT

ಮೈಸೂರು: ಪಠ್ಯ ಪುಸ್ತಕಗಳಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ.ವಿ.ಸದಾನಂದಗೌಡ ಹೇಳಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪಠ್ಯಪುಸ್ತಕದಲ್ಲಿ ಏನಾದರೂ ವ್ಯತ್ಯಾಸವಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿಗಳು ಕೂಡ ಭರವಸೆ ನೀಡಿದ್ದಾರೆ. ಹಾಗಾಗಿ ಸಾಹಿತಿಗಳು ತಮ್ಮ ಅಧ್ಯಾಯವನ್ನು ಹಿಂಪಡೆಯುವಂತೆ ಸರಕಾರಕ್ಕೆ ಪತ್ರ ಬರೆಯುವುದು ಒಳ್ಳೆಯದಲ್ಲ ಎಂದು ಹೇಳಿದರು.

ಸಾಹಿತಿಗಳು ಸರ್ಕಾರಕ್ಕೆ ಪತ್ರ ಬರೆಯುವ ಬದಲು ಏನು ಸರಿಪಡಿಸಬೇಕು ಎಂಬುದರ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಲಿ, ಅದು ಬಿಟ್ಟು ಸುಮ್ಮನೆ ಆಪಾಧನೆ ಮಾಡಬಾರದು ಎಂದು ಹೇಳಿದರು.

ರಾಷ್ಟ್ರಕವಿ ಕುವೆಂಪು ಅವರಿಗೆ ನಾವು ಯಾವುದೇ ರೀತಿಯಲ್ಲೂ ಅವಮಾನ ಮಾಡಿಲ್ಲ, ಅವರ ಎರಡು ಗೀತೆಗಳನ್ನು ನಾಡಗೀತೆಗಳನ್ನಾಗಿ ಮಾಡಿದ್ದೇ ಬಿಜೆಪಿ ಸರ್ಕಾರ. ಪ್ರತಿಪಕ್ಷಗಳು ರೋಹಿತ್ ಚಕ್ರತೀರ್ಥ ಅವರ ಹಳೆಯ ವಿಚಾರಗಳನ್ನು ಹಿಡಿದು ಎಳೆದಾಡುತ್ತಿವೆ ಎಂದು ಕಿಡಿಕಾರಿದರು.

ಆರ್.ಎಸ್.ಎಸ್ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಂತರ ವಾಗ್ದಾಳಿ ನಡೆಸುತ್ತಿರುವ ವಿಚಾರ ಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿ.ವಿ.ಸದಾನಂದಗೌಡ, ನಿನ್ನೆಯಿಂದ ಇದು ಬದಲಾಗಿದ್ದು ಕುಮಾರಸ್ವಾಮಿ ವರ್ಸಸ್ ಸಿದ್ದರಾಮಯ್ಯ ಎಂಬಂತಾಗಿದೆ. ಅವರಿಗೆ ಬೇರೆ ವಿಚಾರಗಳು ಇಲ್ಲ, ಅವರಿಗೆ ಸದಾ ಆರ್.ಎಸ್.ಎಸ್.‌ ಮಾತ್ರ ಕಾಣುತ್ತಿದೆ. ಹಾಗಾಗಿ ಆರ್.ಎಸ್.ಎಸ್ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವ ಭೀತಿ ಇರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News