×
Ad

ಹದಿನೈದು ವರ್ಷದಿಂದ ಸಾಹಿತ್ಯ ಬರೆಯದ ಕಾಂಗ್ರೆಸ್ ಉಪಕೃತ ಸಾಹಿತಿಗಳಿಂದ ಸಮಸ್ಯೆ ಸೃಷ್ಟಿ : ಪ್ರತಾಪ್ ಸಿಂಹ

Update: 2022-06-01 13:11 IST

ಮೈಸೂರು: ಕಳೆದ ಹದಿನೈದು ವರ್ಷಗಳಿಂದ ಯಾವುದೇ ಸಾಹಿತ್ಯ ಕೃಷಿ ಮಾಡದ ಕಾಂಗ್ರೆಸ್ ಪಕ್ಷದಿಂದ ಉಪಕೃತರಾದ ಸಾಹಿತಿಗಳು ಮಾತ್ರ ತಮ್ಮ ಪಠ್ಯವನ್ನು ಕೈಬಿಡಿ ಎನ್ನುತ್ತಿದ್ದಾರೆ ಎಂದು ಸಾಹಿತಿ ದೇವನೂರ ಮಹಾದೇವ ಸೇರಿದಂತೆ ಅನೇಕ ಸಾಹಿತಿಗಳ ವಿರುದ್ಧ ಸಂಸದ ಪ್ರತಾಪ್ ಸಿಂಹ  ವಾಗ್ದಾಳಿ ನಡೆಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಬುಧವಾರ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ.ವಿ.ಸದಾನಂದಗೌಡ ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ, ಪಠ್ಯದಿಂದ ತಮ್ಮ ಅಧ್ಯಾಯ ಕೈಬಿಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿರುವ ಸಾಹಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂಸದ ಪ್ರತಾಪ್ ಸಿಂಹ, ಇವರೆಲ್ಲಾ ಕಾಂಗ್ರೆಸ್ ನಿಂದ ಉಪಕೃತರಾಗಿ ಇವತ್ತು ಪಠ್ಯ ಕೈಬಿಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಹಂಪನಾಗರಾಜಯ್ಯ, ಬರಗೂರು ರಾಮಚಂದ್ರಪ್ಪ ಸೇರಿದಂತೆ ಅನೇಕ ಸಾಹಿತಿಗಳು ಕಳೆದ ಹದಿನೈದು ವರ್ಷದಿಂದ ಯಾವುದೇ ಸಾಹಿತ್ಯ ಕೃಷಿಯನ್ನು ಮಾಡಿಲ್ಲ, ಬರಗೂರು ರಾಮಚಂದ್ರಪ್ಪ  ಅವರ ಸಾಹಿತ್ಯ ಕೃತಿ ಯಾವುದು ನೆನಪಿದೆ ಎಂದು ಪ್ರಶ್ನಿಸಿದರು.

ಮೊದಲು ಭಗತ್ ಸಿಂಗ್ ಪಠ್ಯ ಕೈಬಿಡಲಾಗಿದೆ ಎಂದು ವಿವಾದ ಉಂಟು ಮಾಡಿದರು. ನಂತರ ನಾರಾಯಣಗುರು, ವಿಚಾರ ತಂದರು, ಈ ಬಗ್ಗೆ ಚರ್ಚೆಗೆ ಬರುವಂತೆ ಆಹ್ವಾನ ನೀಡಿದರೂ ಯಾವ ಸಾಹಿತಿಯೂ ಚರ್ಚೆಗೆ ಬರಲಿಲ್ಲ, ಇವರು ವಿಚಾರ ಹೀನರಾಗಿಲ್ಲದಿದ್ದರೆ ಚರ್ಚೆಗೆ ಬರುತ್ತಿದ್ದರು ಎಂದು ಹರಿಹಾಯ್ದರು.

ಈಗಾಗಲೇ ಮೂಡ್ನಾಕೂಡು ಚಿನ್ನಸ್ವಾಮಿ, ಜಿ.ರಾಮಕೃಷ್ಣ, ಸರೋಜ ಕಾಟ್ಕರ್, ಅವರೆಲ್ಲರ ಪಠ್ಯ ಕೈಬಿಟ್ಟ ಮೇಲೆ ಪಠ್ಯ ಕೈಬಿಡಿ ಎಂದು ಹೇಳುತ್ತಿದ್ದಾರೆ. ದೇವನೂರ ಮಹಾದೇವ ಅವರ ಪಠ್ಯವನ್ನು ಈಗಾಗಲೇ ಯುವಕರು ತುಂಬಾ ಓದಿದ್ದಾರೆ ಎಂದು ಹೇಳುವ ಮೂಲಕ ಇವರ ಪಠ್ಯ ಕೈಬಿಟ್ಟರೆ ಏನು ಎನ್ನುವ ಅರ್ಥದಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ 13 ಪ್ರತಿಷ್ಠಾನ ಇದೆ. ಅದರಲ್ಲಿ ಹಂಪನಾಗರಾಜ್ಮಯ್ಯ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ  ರಾಜೀನಾಮೆ ನೀಡಿರಬಹುದು. ಆದರೆ ಅವರ ಪತ್ನಿ ಕಮಲಾ ಹಂಪನಾ ಈ ಪ್ರತಿಷ್ಠಾನದ ಸದಸ್ಯರು ಅವರು ಏಕೆ ರಾಜೀನಾಮೆ ಕೊಟ್ಟಿಲ್ಲ? ಇವರಿಗೆ ಮನೆಯಲ್ಲೆ ಹೊಂದಾಣಿಕೆ ಇಲ್ಲ ಇನ್ನೇನು ಇವರು ಮಾತನಾಡುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಂಪನಾಗರಾಜಯ್ಯ ವಿರುದ್ಧ ಶ್ಯಾಮ್ ಸುಂದರ್ ಸಮಿತಿ ಭ್ರಷ್ಟಾಚಾರದ ತನಿಖೆ ನಡೆಸಿತ್ತು, ಬಿ.ಟಿ.ಲಲಿತಾ ನಾಯಕ್ ಪುತ್ರ ಈ ಹಿಂದೆ ಅಂಬೇಡ್ಕರ್ ಪುತ್ಥಳಿಗೆ ಅವಮಾನ ಮಾಡಿದ್ದರು. ಇನ್ನೂ ಜಿ.ರಾಮಕೃಷ್ಣ ಕಮ್ಯುನಿಸ್ಟ್ ಹಿನ್ನಲೆಯುಳ್ಳವರು. ಹಾಗಾಗಿ ಇಂತವರನ್ನೆಲ್ಲಾ ಅದ್ಭುತ ಸಾಹಿತಿಗಳು ಎನ್ನುಕೊಳ್ಳುವುದು ಬೇಡ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News