ಚಾಮರಾಜನಗರ ಜಿಲ್ಲೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಖಾಸಗಿ ಪ್ರವಾಸ

Update: 2022-06-01 09:57 GMT

ಚಾಮರಾಜನಗರ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಚಾಮರಾಜನಗರದ ದೀನಬಂಧು ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಮಾತುಕತೆ ನಡೆಸಿದರು.

ಸುಪ್ರೀಂ ಕೋರ್ಟ್‌ಗೆ ಬೇಸಿಗೆ ರಜೆ ಇರುವ ಹಿನ್ನೆಲೆಯಲ್ಲಿ ಸಿಜೆಐ ರಮಣ ಅವರು ಪತ್ನಿ ಸಮೇತ ರಾಜ್ಯಕ್ಕೆ ಭೇಟಿ ನೀಡಿರುವ ಸುಪ್ರೀಂ ಕೋರ್ಟ್  ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ಪತ್ನಿ ಶಿವಮಾಲಾ ರಮಣ ಅವರ ಜೊತೆಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ, ಅಲ್ಲಿ ಚಾಮುಂಡೇಶ್ವರಿ ದರ್ಶನ ಮಾಡಿ ರಸ್ತೆ ಮಾರ್ಗದ ಮೂಲಕ ಚಾಮರಾಜನಗರಕ್ಕೆ ಬಂದಿದ್ದರು.

ಚಾಮರಾಜನಗರದ ಹೊರವಲಯದಲ್ಲಿರುವ ಹರಳುಕೋಟೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಪತ್ನಿ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಉದ್ಯಮಿ ವಿಜಯ್ ಕುಮಾರ್ ಅವರ ಮನೆಗೆ ತೆರಳಿ ಭೋಜನ ಸ್ವೀಕರಿಸಿದರು.

ಬಳಿಕ ದೀನಬಂಧು ಆಶ್ರಮಕ್ಕೆ ಭೇಟಿ ನೀಡಿ, ಮಕ್ಕಳೊಂದಿಗೆ ಮಾತುಕತೆ ನಡೆಸಿದರು.  ಶಾಲೆಯಲ್ಲಿನ ಕಲಿಕಾ ವಿಧಾನ ಹಾಗೂ ವಿಜ್ಞಾನ ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು.

ದೀನಬಂಧು ಸಂಸ್ಥೆಯು ಮಕ್ಕಳಿಗೆ ವಿದ್ಯೆ ನೀಡುವುದರ ಜೊತೆಗೆ, ಜೀವನ ರೂಪಿಸಿಕೊಳ್ಳಲೂ ನೆರವಾಗುತ್ತಿದೆ. ಇಲ್ಲಿ ಓದಿದ ಮಕ್ಕಳು ಮುಂದಿನ ಜೀವನದಲ್ಲಿ ಒಳ್ಳೆಯ ಹುದ್ದೆಗಳನ್ನು ಅಲಂಕರಿಸಬೇಕು. ಕಲಿತ ವಿದ್ಯೆಯನ್ನು ಯಾವುದಾದರೂ ರೂಪದಲ್ಲಿ ಸಮಾಜಕ್ಕೆ ಹಿಂದಿರುಗಿಸಿ ಎಂದು
ಮುಖ್ಯ ನ್ಯಾಯಮೂರ್ತಿಗಳು ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್, ಡಿವೈಎಸ್ಪಿ. ಪ್ರಿಯದರ್ಶಿನಿ ಸಾಣೆಕೊಪ್ಪ, ಉದ್ಯಮಿ ವಿಜಯಕುಮಾರ್, ದೀನಬಂಧು ಸಂಸ್ಥೆಯ ಆಡಳಿತಾಧಿಕಾರಿ ಪ್ರಜ್ಞಾ ಉಪಸ್ಥಿತರಿದ್ದರು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ರವರು ಖಾಸಗಿ ಭೇಟಿಗಾಗಿ ಬಂದಿದ್ದರಿಂದ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಅವರು ಭೇಟಿ ನೀಡುವ ಸ್ಥಳಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ರಾತ್ರಿ ಗುಂಡ್ಲುಪೇಟೆಯ ಬಂಡೀಪುರಕ್ಕೆ ತೆರಳಿ ವಾಸ್ತವ್ಯ ಹೂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News