ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯ: ಪತಿ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶ
ಬೆಂಗಳೂರು, ಜೂ.1: ಪತ್ನಿಯನ್ನು ಅಸಹಜ ಲೈಂಗಿಕತೆಗೆ ಒತ್ತಾಯಿಸಿದ ಹಾಗೂ ಆಕೆಯ ತಂದೆಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ ಕುರಿತು ಪತ್ನಿ ದೂರು ಸಲ್ಲಿಸಿದ್ದರೂ, ಅವುಗಳನ್ನು ಕೈಬಿಟ್ಟು, ದೌರ್ಜನ್ಯ ಆರೋಪದಡಿಯಷ್ಟೇ ತನಿಖೆ ನಡೆಸಿ ದೋಷಾರೋಪಣೆ ಸಲ್ಲಿಸಿದ್ದ ಪೊಲೀಸರ ಕ್ರಮವನ್ನು ನಿರ್ಲಕ್ಷ್ಯದ ತನಿಖೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಆರೋಪಿ ವಿರುದ್ಧ ಸೂಕ್ತ ತನಿಖೆ ನಡೆಸಿ ಹೆಚ್ಚುವರಿ ದೋಷಾರೋಪಪಟ್ಟಿ ಸಲ್ಲಿಸುವಂತೆ ಆದೇಶಿಸಿದೆ.
ಪತ್ನಿಯ ದೂರಿನ ಮೇರೆಗೆ ವಿವೇಕನಗರ ಠಾಣೆ ಪೊಲೀಸರು ದಾಖಲಿಸಿರುವ ಕಿರುಕುಳ ಪ್ರಕರಣ ರದ್ದುಪಡಿಸುವಂತೆ ಸಾಫ್ಟ್‍ವೇರ್ ಉದ್ಯೋಗಿಯಾಗಿರುವ ಆರೋಪಿ ಪತಿ ಸಲ್ಲಿಸಿದ್ದ ಅರ್ಜಿ ಹಾಗೂ ತನ್ನ ದೂರಿನ ಮೇರೆಗೆ ಪೊಲೀಸರು ಸೂಕ್ತ ತನಿಖೆ ನಡೆಸಿಲ್ಲ. ಹೀಗಾಗಿ ಸೂಕ್ತ ತನಿಖೆ ನಡೆಸುವಂತೆ ನಿರ್ದೇಶಿಸಬೇಕು ಎಂದು ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ತೀರ್ಪು ನೀಡಿದೆ.
ಛತ್ತೀಸ್‍ಗಢದ ರಾಯಪುರ ಮೂಲದ ಮಹಿಳೆ ಹಾಗೂ ಬೆಂಗಳೂರಿನ ವ್ಯಕ್ತಿಯ ಮಧ್ಯೆ 2013ರಲ್ಲಿ ಮುಂಬೈನ ಪ್ರತಿಷ್ಠಿತ ಐಐಟಿಯಲ್ಲಿ ಓದುವಾಗ ಪ್ರೇಮಾಂಕುರವಾಗಿತ್ತು. 2015ರಲ್ಲಿ ಪಿಹೆಚ್‍ಡಿ ಅಧ್ಯಯನದ ವೇಳೆ ಇಬ್ಬರೂ ವಿವಾಹವಾಗಿದ್ದರು. ಮದುವೆ ಬಳಿಕ ಬೆಂಗಳೂರಿನಲ್ಲೇ ವಾಸವಿದ್ದರು. ಕೆಲ ಸಮಯದ ಬಳಿಕ ಅಸ್ವಾಭಾವಿಕ ಲೈಂಗಿಕತೆಗೆ ಪತಿ ಒತ್ತಾಯಿಸುತ್ತಿದ್ದನೆಂಬ ಕಾರಣಕ್ಕೆ ಪತ್ನಿ ತವರಿಗೆ ಹೋಗಿದ್ದರು. ಹಾಗೆ ನಡೆದುಕೊಳ್ಳುವುದಿಲ್ಲ ಎಂಬ ಭರವಸೆ ಮೇರೆಗೆ ವಾಪಸ್ ಬಂದಿದ್ದರು. ಆದರೆ, ಪತಿಯ ನಡವಳಿಕೆ ಸರಿಹೋಗದ ಕಾರಣಕ್ಕೆ 2016ರಲ್ಲಿ ಮತ್ತೆ ತವರಿಗೆ ವಾಪಸಾಗಿದ್ದರು.
ಮನೆ ಬಿಟ್ಟುಹೋದ ಬಳಿಕ ಪತಿ ಆಕೆಯ ತಂದೆಗೆ ಮಗಳ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗುತ್ತಿದೆ. ನಂತರ, ಪತ್ನಿಯ ಕೆಲವು ಅಶ್ಲೀಲ ಚಿತ್ರಗಳನ್ನು ಆಕೆಯ ತಂದೆ ಮತ್ತು ಆಕೆಯ ಸ್ನೇಹಿತರಿಗೆ ಕಳುಹಿಸಿದ್ದ ಎಂದು ಛತ್ತೀಸ್‍ಗಢದಲ್ಲಿ ಪೊಲೀಸರಿಗೆ ಮಹಿಳೆ ದೂರು ನೀಡಿದ್ದರು.
ರಾಯಪುರ ಪೊಲೀಸರು ಆರೋಪಿ ಪತಿ ವಿರುದ್ಧ ಐಪಿಸಿ ಸೆಕ್ಷನ್ 498ಎ(ಪತಿ ಕುಟುಂಬದಿಂದ ದೌರ್ಜನ್ಯ), 377(ಅಸ್ವಾಭಾವಿಕ ಲೈಂಗಿಕತೆ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ-2000ದ ಸೆಕ್ಷನ್ 66ಇ, 67 ಅಡಿ ಎಫ್‍ಐಆರ್ ದಾಖಲಿಸಿ ಬೆಂಗಳೂರು ಪೆÇಲೀಸರಿಗೆ ಪ್ರಕರಣವನ್ನು ವರ್ಗಾವಣೆ ಮಾಡಿದ್ದರು.
ವಿವೇಕನಗರ ಠಾಣೆ ಪೊಲೀಸರು ತನಿಖೆ ನಡೆಸಿ 498ಎ ಅಡಿ ಮಾತ್ರ ವಿಚಾರಣಾ ನ್ಯಾಯಾಲಯಕ್ಕೆ ದೋμÁರೋಪಪಟ್ಟಿ ಸಲ್ಲಿಸಿದ್ದರು. ದೋಷಾರೋಪಣೆ ಸಲ್ಲಿಸಿದ ನಂತರ ಪ್ರಕರಣ ರದ್ದು ಕೋರಿ ಪತಿ ಅರ್ಜಿ ಸಲ್ಲಿಸಿದ್ದರು. ಆದರೆ, ತನ್ನ ದೂರಿನ ಅನ್ವಯ ಪೆÇಲೀಸರು ತನಿಖೆ ನಡೆಸಿಲ್ಲ ಎಂದು ಪತ್ನಿ ಆರೋಪಿಸಿದ್ದರು. ಜತೆಗೆ ತನ್ನ ದೂರಿನ ಅನ್ವಯ ತನಿಖೆ ನಡೆಸುವಂತೆ ಪೆÇಲೀಸರಿಗೆ ನಿರ್ದೇಶನ ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.
ಎರಡೂ ಅರ್ಜಿಗಳನ್ನು ವಿಚಾರಣೆ ನಡೆಸಿದ ಪೀಠ, ದೂರಿನಲ್ಲಿರುವ ವಿವರಗಳು ಮತ್ತು ಪೊಲೀಸರು ದಾಖಲಿಸಿರುವ ವಿಷಯಗಳನ್ನು ತನಿಖಾಧಿಕಾರಿಗಳು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ.
ತನಿಖೆ ವೇಳೆ ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾದ ಆಕೆಯ ತಂದೆಯ ಮೊಬೈಲ್ನ್ ಪೋನ್ ಲ್ಲಿರುವ ವಿಷಯಗಳ ಬಗ್ಗೆ ಚಾರ್ಜ್‍ಶೀಟ್‍ನಲ್ಲಿ ಯಾವುದೇ ಉಲ್ಲೇಖವಿಲ್ಲ. ಅಲ್ಲದೆ, ಈ ತನಿಖೆ ನಿರ್ಲಕ್ಷ್ಯದ ತನಿಖೆ ಎಂದು ಅಭಿಪ್ರಾಯಪಟ್ಟಿರುವ ಪೀಠ, ಎರಡು ತಿಂಗಳಲ್ಲಿ ಪೊಲೀಸರು ಸೂಕ್ತ ತನಿಖೆ ನಡೆಸಿ ಹೆಚ್ಚುವರಿ ದೋಷಾರೋಪಣೆ ಸಲ್ಲಿಸಬೇಕು. ಅಲ್ಲಿವರೆಗೂ ವಿಚಾರಣಾ ನ್ಯಾಯಾಲಯ ವಿಚಾರಣೆ ಮುಂದುವರೆಸಬಾರದು ಎಂದು ಆದೇಶಿಸಿದೆ.