ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ರದ್ದುಪಡಿಸಿ: ಸಿಪಿಎಂ

Update: 2022-06-01 15:30 GMT

ಬೆಂಗಳೂರು, ಜೂ.1: ನಾಡಿನ ಗಣ್ಯ ಸಾಹಿತಿಗಳು, ಪ್ರಗತಿಪರರು, ಸಂಘ ಸಂಸ್ಥೆಗಳು ರಾಜ್ಯದಾದ್ಯಂತ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದರೂ, ರಾಜ್ಯ ಸರಕಾರ ನಾಚಿಕೆ ಇಲ್ಲದೇ ಪಠ್ಯ ಪುಸ್ತಕ ಪರಿಸ್ಕರಣೆ ಸಮಿತಿಯನ್ನು ಮತ್ತು ಅದು ಮಾಡಿದ ಪರಿಷ್ಕರಣ ಪಠ್ಯ ಕ್ರಮಗಳನ್ನು ಕೈ ಬಿಡದೇ ಮುಂದುವರೆಸುತ್ತಿರುವುದನ್ನು ಸಿಪಿಎಂ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.

ಈ ಕೂಡಲೆ ಪರಿಷ್ಕರಿಸಿದ ಪಠ್ಯ ಕ್ರಮಗಳನ್ನು, ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯನ್ನು ರದ್ದುಪಡಿಸಬೇಕು. ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕುವೆಂಪುರವರ ಕುರಿತಂತೆ ಮತ್ತು ಅವರ ಬರೆದಿರುವ ‘ನಾಡಗೀತೆ’ಯ ಕುರಿತಂತೆ ನಿಂದನೆ ಹಾಗೂ ಅಪಮಾನ ಮಾಡುವುದೆಂದರೆ ನಾಡಿಗೆ ಅಪಮಾನ ಮಾಡಿದಂತೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ತಿಳಿಸಿದ್ದಾರೆ. 

ಇಂತಹವರನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರನ್ನಾಗಿಸಿರುವುದು ಮತ್ತು ನಿಂದಿಸಿದವರ ಮೇಲೆ ಯಾವುದೇ ಕಾನೂನು ಕ್ರಮಗಳನ್ನು ತೆಗೆದುಕೊಳ್ಳದಿರುವುದು, ರಾಜ್ಯದ ಬಿಜೆಪಿ ಪಕ್ಷದ ನಡೆಯು ಸಹ ಬೆಂಬಲ ವ್ಯಕ್ತಪಡಿಸಿರುವುದು ಪುಂಡಾಟಿಕೆಯನ್ನು ಸಮರ್ಥಿಸುವಂತಿವೆ ಎಂದು ಅವರು ಟೀಕಿಸಿದ್ದಾರೆ. 

ಇಂತಹ ನಡೆಗಳು ನಾಡಿನ ಗಣ್ಯರನ್ನು ದುರುದ್ದೇಶದಿಂದಲೇ ಅಪಮಾನ ಮಾಡಲಾಗಿದೆಯೆಂಬುದನ್ನು ತೋರುತ್ತದೆ ಎಂದು ಸಿಪಿಎಂ ತನ್ನ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸುತ್ತದೆ ಎಂದು ಬಸವರಾಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News