ಕುವೆಂಪು, ನಾಡಗೀತೆ ಅವಹೇಳನ | ಸುಳ್ಳನ್ನು ಸಾಧಿಸುವ ಬದಲು ತಪ್ಪು ಒಪ್ಪಿಕೊಂಡು ಕ್ಷಮೆ ಕೇಳುವುದು ಮೇಲು: ಹಂಪನಾ ಸಲಹೆ

Update: 2022-06-01 17:13 GMT

ಬೆಂಗಳೂರು, ಜೂ.1: ಕುವೆಂಪು ಮತ್ತು ನಾಡಗೀತೆ ಅವಹೇಳನವು ‘ವಾಟ್ಸ್ ಆ್ಯಪ್‍ನಲ್ಲಿ ಬಂದಿದೆ’ ಎಂದು ಸಮಜಾಯಿಷಿ ನೀಡಲಾಗುತ್ತಿದ್ದು, ಇದು ಫಾರ್ವರ್ಡ್ ಸಂದೇಶ ಎಂದು ನಂಬಲು ಸರಿಯಾದ ಕುರುಹುಗಳಿಲ್ಲ. ಹಾಗಾಗಿ ಸುಳ್ಳನ್ನು ಸಾಧಿಸುವ ಬದಲು ತಪ್ಪು ಒಪ್ಪಿಕೊಂಡು ಕ್ಷಮೆ ಕೇಳುವುದು ಮೇಲು ಎಂದು ಸಾಹಿತಿ ಹಂಪನಾ ಅವರು ಪ್ರಕಟನೆಯಲ್ಲಿ ಸಲಹೆ ನೀಡಿದ್ದಾರೆ. 

ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಸಾರ್ವಜನಿಕರು ದೂರವಾಣಿ ಮೂಲಕ ವಿಚಾರಿಸುತ್ತಿದ್ದಾರೆ. ಕೆಲವರು ರೋಹಿತ್ ಚಕ್ರತೀರ್ಥರನ್ನು ಬೆಂಬಲಿಸಿ, ನಾನು ರಾಜೀನಾಮೆ ನೀಡಿರುವುದು ಸರಿಯಲ್ಲ ಎಂದು ವಾದಿಸುತ್ತಿದ್ದಾರೆ. ಕುವೆಂಪು ನಿಂದನೆಯ ಸಾಲುಗಳನ್ನು ರೋಹಿತರು ಬರೆದದ್ದಲ್ಲ, ಬೇರೆ ಯಾರೋ ಬರೆದದ್ದು. ತಮಗೆ ಜಾಲತಾಣದಲ್ಲಿ ಬಂದುದ್ದನ್ನು ಫಾರ್ವರ್ಡ್ ಮಾಡಿದಾರೆ ಅಷ್ಟೇ ಎಂದು ದೂರವಾಣಿಯಲ್ಲಿ ಅವರು ವಿವರಣೆಯನ್ನು ನೀಡುತ್ತಿದ್ದಾರೆ.

ಇದಕ್ಕೆ ಮರು ಉತ್ತರವಾಗಿ ಹಂಪನಾ ಅವರು, “ನಿಂದನೆಯ ಒಕ್ಕಣೆ ಬರೆದವರು ಯಾರು, ಜಾಲತಾಣದಲ್ಲಿ ಯಾರಿಂದ ನಿಮಗೆ ಬಂತೆಂಬುದನ್ನು ಮೊದಲು ಸ್ಪಷ್ಟಪಡಿಸಿ ಮತ್ತು ನಿಮಗೊಬ್ಬರಿಗೆ ಮಾತ್ರ ಅದು ಹೇಗೆ ಬಂತು ಎಷ್ಟನೆಯ ತಾರೀಖು, ಎಷ್ಟು ಹೊತ್ತಿಗೆ ನಿಮಗೆ ಬಂತು. ನಿಮಗೆ ಕಳಿಸಿದವರನ್ನು ‘ಇದು ತಪ್ಪು’ ಎಂದು ಕೇಳಲಿಲ್ಲವೇಕೆ, ನೀವು ಬೇರೆ ಯಾರು ಯಾರಿಗೆ ಫಾರ್ವರ್ಡ್ ಮಾಡಿದಿರಿ” ಎಂದು ಪ್ರಶ್ನಿಸಿದ್ದಾರೆ. 

`ನನ್ನ ಅಯ್ಯ’ ಅನುಮತಿ ಹಿಂದೆಗೆತ

ಪಠ್ಯಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ರಾಜ್ಯದ ಸೌಹಾರ್ದತೆ ಮತ್ತು ಸಾಮರಸ್ಯ ಪರಂಪರೆಯನ್ನು ಹಾಳು ಮಾಡುತ್ತಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ವ್ಯಕ್ತಿತ್ವವನ್ನು ಅವಮಾನಿಸಿದ್ದಾರೆ. ಹಾಗಾಗಿ ರಾಜ್ಯ ಸರಕಾರವು ಏಳನೆಯ ತರಗತಿಯ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿ ಅಳವಡಿಸಿಕೊಂಡಿರುವ ‘ನನ್ನ ಅಯ್ಯ’ ಎಂಬ ಗದ್ಯ ಬರಹವನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ.

-ದು. ಸರಸ್ವತಿ, ಲೇಖಕಿ, ಸಂಘಟಕಿ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News