ವಿದ್ಯಾಭ್ಯಾಸ ಕೊಡಿಸಲು ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಯುಪಿಎಸ್ಸಿಯಲ್ಲಿ ಟಾಪರ್!

Update: 2022-06-07 18:10 GMT
ಅರುಣಾ ಮಹಾಲಿಂಗಪ್ಪ- ಯುಪಿಎಸ್ಸಿ ಸಾಧಕಿ

ತುಮಕೂರು:  ಇತ್ತೀಚೆಗೆ ಪ್ರಕಟವಾದ ಯುಪಿಎಸ್ಸಿ ಫಲಿತಾಂಶದಲ್ಲಿ ಹಲವರು ಉತ್ತಮ ಸಾಧನೆ ಮಾಡಿದ್ದಾರೆ. ಅವರಲ್ಲಿ  ವಿದ್ಯೆ ಕೊಡಿಸಲು ಸಾಲ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಅರುಣಾ ಮಹಾಲಿಂಗಪ್ಪ ಅವರು ಕೂಡ ಒಬ್ಬರು. 

ಇಲ್ಲಿನ 'ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ' ಯಲ್ಲಿ  ಬಿಇ ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿಯ ಎರಡನೇ ಸೆಮಿಸ್ಟರ್‌ನಲ್ಲಿದ್ದಾಗ ಬೆಲೆ ಕುಸಿತ ಹಾಗೂ ಇತರೆ ಸಮಸ್ಯೆಗಳಿಂದ ಸಾಲದ ಸುಳಿಯಲ್ಲಿ ಸಿಲುಕಿ ತನ್ನ  ತಂದೆ 2009ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 308ನೇ ಸ್ಥಾನ ಪಡೆದಿರುವ ಅರುಣಾ ಅವರು ಟಿವಿ ವಾಹಿನಿಯೊಂದರ ಜೊತೆ ತನ್ನ ಜೀವನದ ಕಹಿ ಘಟನೆಗಳ ಕುರಿತು ಹಂಚಿಕೊಂಡಿದ್ದಾರೆ. 

''ನಮ್ಮದು ಒಂದು ಕುಗ್ರಾಮ ಅಂತಾನೇ ಹೇಳಬಹುದು. ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಸಣ್ಣ ಗ್ರಾಮ. ಈವರೆಗೂ ಬಸ್ ವ್ಯವಸ್ಥೆಯೂ ಸರಿಯಾಗಿ ಇಲ್ಲದೇ ಇರುವಂಥ ಒಂದು ಗ್ರಾಮ. ನಾನು ಓದಿದ್ದೆಲ್ಲ ಅಜ್ಜಿ ಮನೆಯಲ್ಲಿ. ಆ ಮನೆಯಲ್ಲಿರಬೇಕಾದರೆ ವಿದ್ಯುತ್ ಸೌಲಭ್ಯ ಕೂಡ ಇರಲಿಲ್ಲ. ನನ್ನ ತಂದೆ ಶ್ರಮಪಟ್ಟು ನಮಗೆ  ಹೆಣ್ಣು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಬೇಕೆಂಬ ಆಸೆ ಪಟ್ಟಿದ್ದರು. ಹೀಗಾಗಿ ತಂದೆಗೆ  ಸಾಲದ ಹೊರೆ ಹಾಗೇ ಆಯಿತು. ಆ ಒಂದು ದಾರಿಯಲ್ಲಿ ನಾವು ಅವರನ್ನು ಕಳೆದುಕೊಳ್ಳಬೇಕಾಯಿತು. ಆ ಬಳಿಕ ನಾನು ಇಂಜಿನಿಯರ್ ಆದದ್ದು. ನಂತರ ಈ ಜಾಗಕ್ಕೆ ಬಂದಿದ್ದು. ಇದಕ್ಕೆ ನನ್ನ ತಂದೆಯವರೇ ಕಾರಣ ಅಂತ ಹೇಳಬಹುದು. ಅವರನ್ನು ಮತ್ತೆ ಕಾಣಬೇಕು ಅಂತ ಆಸೆ ಇರುತ್ತಲ್ಲ, ಅದು ಸೇವೆಯ ಮೂಲಕ ರೈತರ ಮುಖದ ನಗುವಿನ ಮೂಲಕ ಅವರನ್ನು ಕಾಣಬೇಕು ಅನ್ನುವುದು ನನ್ನ ಆಸೆ'' ಎಂದು ಅರುಣಾ ತಿಳಿಸಿದರು. 

ಇದನ್ನೂ ಓದಿ... ಯುಪಿಎಸ್ಸಿಯಲ್ಲಿ ದೃಷ್ಟಿದೋಷ ಯುವತಿಯ ಸಾಧನೆ: ಮೈಸೂರಿನ ಮೇಘನಾಗೆ 435ನೇ ರ್‍ಯಾಂಕ್

''ನನ್ನ ತಂದೆ 2009ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ಸಹ ಅವರು ತಮ್ಮ ಎಲ್ಲ 5 ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸವನ್ನು ಕೊಟ್ಟಿದ್ದಾರೆ. ಅವರು ನಮ್ಮನ್ನು ಅರ್ಧದಲ್ಲಿ ಕೈಬಿಟ್ಟು ಹೋಗಿಲ್ಲ. ಅವರ ಪರಿಶ್ರಮದಿಂದ ನಾನು, ನನ್ನ ತಮ್ಮ ಮತ್ತು ನನ್ನ 2ನೇ ಅಕ್ಕ ಇಂಜಿನಿಯರ್ ಮತ್ತು ನನ್ನ ತಂಗಿ ಎಂಬಿಬಿಎಸ್ ಓದಿದ್ದಳು. ಎಲ್ಲರಿಗೂ ಫೀಸ್ ಕಟ್ಟುವುದಕ್ಕೆ ಅವರು ಸಾಲ ಮಾಡಬೇಕಾಯಿತು. ನಾವು ಎಲ್ಲರೂ ಓದಿ ಉತ್ತಮ ಸ್ಥಿತಿಗೆ ಬರುವ ಸಮಯದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡರು'' ಎಂದು ಅರುಣಾ ನೋವು ತೋಡಿಕೊಂಡಿದ್ದಾರೆ.

''ನನ್ನ ತಂದೆಯ ಸಾವನ್ನು ನಾನು ಸವಾಲಾಗಿ ಸ್ವೀಕರಿಸಿ ರೈತರಿಗೆ ಸೇವೆ ಮಾಡಬೇಕು ಎಂದು ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧಾರ ಮಾಡಿದೆ.  ಈ ವೇಳೆ ನನಗೆ ಆರೋಗ್ಯದಲ್ಲಿ ತೊಂದರೆ ಕಾಣಿಸಿತ್ತು. 5 ಸಲ ಫೇಲ್ ಆಯ್ತು. 6ನೇ ಪರೀಕ್ಷೆಯ ವೇಳೆ ಕೊರೊನ ಬಂದಿತ್ತು. ನಾನು ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದಲೇ ಪರೀಕ್ಷೆಗೆ ಹೋಗುವಂತೆ ಆಯ್ತು. ಈ ಬಾರಿಯೂ ಪರೀಕ್ಷೆಯಲ್ಲಿ ಪಾಸ್ ಆಗುತ್ತೇನೆ ಎಂದು ತಿಳಿದಿರಲಿಲ್ಲ'' ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News