ಪಠ್ಯ ಪರಿಷ್ಕರಣೆ | ಸತ್ಯ ಹೇಳಲು ಹೊರಟಾಗ ವಿರೋಧಗಳು ಸಹಜ: ಎಸ್.ಎಲ್.ಭೈರಪ್ಪ

Update: 2022-06-02 08:06 GMT

ಮೈಸೂರು, ಜೂ.2: ಶಾಲಾ ಮಕ್ಕಳ ವಿದ್ಯಾಭ್ಯಾಸದಲ್ಲಿ ಸತ್ಯವನ್ನು ತಿಳಿಸಬೇಕೆ ಹೊರತು ಯಾವುದೇ ಸಿದ್ಧಾಂತಗಳನ್ನಲ್ಲ. ಸತ್ಯ ಹೇಳಲು ಹೊರಟಾಗ ಇಂತಹ ವಿರೋಧಗಳು ಎದುರಾಗುವುದು ಸಹಜ ಎಂದು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಪಠ್ಯ ಪರಿಷ್ಕರಣೆ ವಿವಾದದ ಕುರಿತಂತೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ನಗರದ ಕುವೆಂಪು ನಗರದಲ್ಲಿರುವ ಅವರ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಲಾ ಮಕ್ಕಳ ವಿದ್ಯಾಭ್ಯಾಸದಲ್ಲಿ ಸತ್ಯ ಹೇಳುವ ಬದಲು ಅವರಿವರ ಸಿದ್ಧಾಂತಗಳನ್ನು ಹೇರಲಾಗಿದೆ. ಇದು ಸರಿಯಲ್ಲ, ಸತ್ಯ ಹೇಳಲು ಹೊರಟಾಗ ಕೆಲವರು ಬೇಕಂತಲೇ ಗಲಾಟೆ ಎಬ್ಬಿಸುತ್ತಾರೆ ಎಂದು ಕಿಡಿಕಾರಿದರು.

ಈ ಹಿಂದೆ ವಾಜಪೇಯಿ ಪ್ರಧಾನ ಮಂತ್ರಿಯಾಗಿದ್ದಾಗಲೂ ಸರಕಾರ ಪಠ್ಯ ಪರಿಷ್ಕರಣೆಗೆ ಮುಂದಾಗಿತ್ತು, ಆದರೆ ದೊಡ್ಡಮಟ್ಟದಲ್ಲಿ ಇದಕ್ಕೆ ಪ್ರತಿರೋಧ ವ್ಯಕ್ತವಾದ ಕಾರಣ ಪರಿಷ್ಕರಣೆ ಹಿಂಪಡೆದರು. ಅದನ್ನೇ ಬಂಡವಾಳವಾಗಿಸಿಕೊಂಡು ಕೆಲವರು ಗಲಾಟೆ ಎಬ್ಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಿಪ್ಪು ಸುಲ್ತಾನ್ ಶೃಂಗೇರಿ ಮಠಕ್ಕೆ ದಾನ ಮಾಡಿದ ಎಂಬುದನ್ನೇ ಅತಿಯಾಗಿ ಬಿಂಬಿಸಲಾಗಿದೆ. ಆದರೆ ಟಿಪ್ಪು ಕೊಡವರನ್ನು ಹತ್ಯೆ ಮಾಡಿದ್ದು, ಮೇಲುಕೋಟೆ ಪುರೋಹಿತರನ್ನು ಕೊಲೆ ಮಾಡಿದ್ದನ್ನು ಹೇಳ್ತಾ ಇಲ್ಲ. ಇಂತಹ ಕೆಲವು ಸತ್ಯಗಳನ್ನು ಪಠ್ಯದ ಮೂಲಕ ಹೇಳಲು ಹೊರಟರೆ ವಿರೋಧಗಳು ನಡೆಯುತ್ತವೆ. ಕಾಲಕ್ರಮೇಣ ಎಲ್ಲವೂ ಸರಿಯಾಗುತ್ತವೆ ಎಂದು ಪಠ್ಯ ಪರಿಷ್ಕರಣೆಯನ್ನು ಸಮರ್ಥಿಸಿದರು.

ನರೇಂದ್ರ ಮೋದಿ ಪ್ರಧಾನಿಯಾದ ಎರಡು ವರ್ಷದಲ್ಲಿ ಅವರ ಕಾರ್ಯವನ್ನು ಸಹಿಸದೇ ಕೆಲವರು ಸಾಹಿತ್ಯ ಅಕಾಡಮಿ ಪ್ರಶಸ್ತಿಗಳನ್ನು ವಾಪಸ್ ನೀಡಿದ ಪ್ರಸಂಗಗಳು ನಡೆಯಿತು. ಈ ವೇಳೆ ಅಕಾಡಮಿ ಅಧ್ಯಕ್ಷರು ನನ್ನನ್ನು ಈ ಬಗ್ಗೆ ಕೇಳುತ್ತಾರೆ. ಆಗ ನಾನು ಪ್ರಶಸ್ತಿಗಳನ್ನು ಹಿಂಪಡೆಯಿರಿ, ಜೊತೆಗೆ ಅವರಿಗೆ ನೀಡಿರುವ ಹಣವನ್ನು ವಾಪಸ್ ಪಡೆಯಿರಿ ಎಂದು ಹೇಳಿದೆ. ಅದಾದ ನಂತರ ಅದು ಅಷ್ಟಕ್ಕೇ ಕೊನೆಯಾಯಿತು. ಹಾಗಾಗಿ ಸತ್ಯ ತಿಳಿಸಲು ಹೊರಟಾಗ ಇಂತಹ ವಿರೋಧಗಳು ನಡೆಯತ್ತವೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬಾರದು ಎಂಬ ಅರ್ಥದಲ್ಲಿ ಪಠ್ಯ ಪರಿಷ್ಕರಣೆ ವಿವಾದ ಕುರಿತು ಹೇಳಿದರು.

ಸುದ್ದಿಗೋಷ್ಠಿ ನಂತರ ಪತ್ರಕರ್ತರ ಯಾವುದೇ ಪ್ರಶ್ನೆಗೆ ಉತ್ತರಿಸದೆ ಎಸ್.ಎಲ್.ಭೈರಪ್ಪ ಹೊರಟು ಹೋದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News