ಎಸ್ಸಿ-ಎಸ್ಟಿ ಕಲ್ಯಾಣ ಸಮಿತಿ ಸಭೆಗೆ ಹಾಜರಾಗದಿರಲು ನಿರ್ಧಾರ: ಪ್ರಿಯಾಂಕ್ ಖರ್ಗೆ

Update: 2022-06-02 08:59 GMT

ಕಲಬುರಗಿ, ಜೂ.2: ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ(ಎಸ್ಸಿ-ಎಸ್ಟಿ ಕಲ್ಯಾಣ ಸಮಿತಿ) ಸಭೆಗಳಲ್ಲಿ ಹಲವು ಗಂಭೀರ ವಿಚಾರಗಳ ಬಗ್ಗೆ ಚರ್ಚೆಗಳಾದರೂ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗದೇ ಇರುವುದರಿಂದ ಇಂತಹ ಸಭೆಯಲ್ಲಿ ಭಾಗವಹಿಸದಿರಲು ತೀಮಾನಿಸಿದ್ದೇನೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯಲ್ಲಿನ ಗಂಗಾ ಕಲ್ಯಾಣ ಯೋಜನೆಯಲ್ಲಿ ನಡೆದಿದ್ದ 431 ಕೋಟಿ ರೂ. ಅಕ್ರಮದ ಬಗ್ಗೆ ಚರ್ಚೆ ನಡೆಸುವಂತೆ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಗೆ  ಹಲವು ಬಾರಿ ಕೋರಿದ್ದೆನು. ಆದರೆ ಈ ವಿಷಯದ ಬಗ್ಗೆ ಚರ್ಚೆ ಮಾಡುವುದಾಗಲಿ, ಕ್ರಮ ತೆಗೆದುಕೊಳ್ಳುವ ಕೆಲಸವನ್ನು ಈ ಬಿಜೆಪಿ ಸರಕಾರ ಮಾಡಲಿಲ್ಲ. ಅದೇರೀತಿ ಸುಳ್ಳು ಜಾತಿ ಪತ್ರ ವಿಚಾರವಾಗಿ ತೀರ್ಮಾನಗಳಾಗಿಲ್ಲ. ಇಂತಹ ನಾಮಕಾವಸ್ತೆ ಸಮಿತಿಯಲ್ಲಿ ಮುಂದುವರೆಯುವುದು ನನಗೆ ಸೂಕ್ತವೆನಿಸುತಿಲ್ಲ ಹಾಗಾಗಿ ಈ ಸಮಿತಿಯನ್ನು ಬಹಿಷ್ಕರಿಸುತಿದ್ದೇನೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಕಲ್ಯಾಣ‌ ಸಮಿತಿ ಅಧ್ಯಕ್ಷ ಎಂ.ಪಿ.ಕುಮಾರ ಸ್ವಾಮಿ ಅವರಿಗೆ ಪತ್ರ ಬರೆದಿರುವ ಖರ್ಗೆ, ಮಧ್ಯಂತರ ತನಿಖಾ ವರದಿಯಲ್ಲಿ ಗಂಗಾಕಲ್ಯಾಣ ಯೋಜನೆಯಲ್ಲಿ 431 ಕೋಟಿ ರೂ.ಗಳ ಅಕ್ರಮ ನಡೆದಿರುವುದು ಸಾಬೀತಾಗಿದೆ. ಇದರಿಂದ ಎಸ್ಸಿ-ಎಸ್ಟಿ ಸಮುದಾಯದವರಿಗೆ ಅನ್ಯಾಯವಾದರೂ ಈ ವಿಷಯನ್ನು ಚರ್ಚೆಗೆ ಇಲ್ಲಿಯವರೆಗೂ ತೆಗೆದುಕೊಂಡಿರುವುದಿಲ್ಲ.

ಇಷ್ಟಾದರೂ ಸಮಿತಿ ಈ ವಿಚಾರದಲ್ಲಿ ನಿರ್ಣಯ ತೆಗೆದುಕೊಳ್ಳದೇ ಇರುವುದು ಆತ್ಮವಂಚನೆ ಅನ್ನುವುದು ನನ್ನ ಭಾವನೆ. ಇದರಿಂದ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯಿಂದ ದೂರ ಉಳಿಯಲು ನಿರ್ಧರಿಸಿರುತ್ತೇನೆ ಎಂದು ಪತ್ರ ದಲ್ಲಿ ನಮೂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News