ರಾಜ್ಯದಲ್ಲಿ ಜಾತ್ಯತೀತ ಶಕ್ತಿಗಳನ್ನು ದುರ್ಬಲಗೊಳಿಸುವ ಕುತಂತ್ರ ಸೋಲಿಸಲು ಸಿಪಿಎಂ ಕರೆ

Update: 2022-06-02 11:45 GMT

ಬೆಂಗಳೂರು, ಜೂ.2: ಬಿಜೆಪಿ ಹಾಗೂ ಆರೆಸ್ಸೆಸ್ ಮತ್ತು ಮುಸಿಮ್ ಕೋಮುವಾದಿ ಶಕ್ತಿಗಳು ಮುಂಬರುವ ಚುನಾವಣೆಗಳಲ್ಲಿ ಜಾತ್ಯತೀತ ಶಕ್ತಿಗಳನ್ನು ದುರ್ಬಲಗೊಳಿಸುವ ಹುನ್ನಾರವನ್ನು ರಾಜ್ಯದ ಜನತೆ ಪ್ರಬುದ್ಧತೆಯಿಂದ ಸೋಲಿಸಬೇಕೆಂದು ರಾಜ್ಯದ ಜನತೆಗೆ ಸಿಪಿಎಂ ರಾಜ್ಯ ಸಮಿತಿ ಕರೆ ನೀಡಿದೆ.

ಹಿಂದುತ್ವವಾದಿ ಮತಾಂಧ ಶಕ್ತಿಗಳು ರಾಜ್ಯವನ್ನು ಲೂಟಿಗೀಡುವ ಲೂಟಿಕೋರರೊಂದಿಗೆ ಕೈ ಜೋಡಿಸಿ ಮೂರು ರೈತ ವಿರೋಧಿ ಕಾಯ್ದೆಗಳು ಹಾಗೂ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳು. ಅಲ್ಲದೇ ಮಹಿಳೆಯರು, ದಲಿತರು ಹಾಗೂ ಎಲ್ಲ ಬಡವರ ವಿರೋಧಿಯಾದ ಲೂಟಿಕೋರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಸಂರಕ್ಷಣೆಗೆ ನಿಂತು ಜನತೆಯನ್ನು ವಿಭಜಿಸಿ ಆಳುವ ಕೆಲಸವನ್ನು ಬಲಪಡಿಸಿವೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ದೂರಿದ್ದಾರೆ. 

ಇದಕ್ಕೆ ಮುಸ್ಲಿಮ್ ಕೋಮುವಾದಿ ಶಕ್ತಿಗಳು ಕೈ ಜೋಡಿಸಿ, ರಾಜ್ಯದಲ್ಲಿ ಕೋಮುವಾದ ಹರಡುವಿಕೆಗೆ ಮತ್ತು ಆ ಮೂಲಕ ಜನತೆಯ ನಿಜವಾದ ಪ್ರಶ್ನೆಗಳು ನೇಪತ್ಯಕ್ಕೆ ಸರಿಯುವಂತೆ ಮಾಡುವಲ್ಲಿ ಶ್ರಮಿಸುತ್ತಿವೆ. ಆ ಮೂಲಕ ಜಾತ್ಯತೀತ ಶಕ್ತಿಗಳನ್ನು ದುರ್ಬಲಗೊಳಿಸುವ ಹುನ್ನಾರ ಹೆಣೆದಿವೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯ ಸರಕಾರವೂ ಸಂವಿಧಾನ ವಿರೋಧಿ ನಡೆಗಳನ್ನು, ಜನತೆಯ ಪ್ರಜಾಪ್ರಭುತ್ವ ಹಾಗೂ ಬದುಕುವ ಹಕ್ಕುಗಳ ಮೇಲೆ ದಾಳಿಯನ್ನು ಮುನ್ನಡೆಸಿದೆ. ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-2020 ಹಾಗೂ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ ಸುಗ್ರೀವಾಜ್ಞೆಗಳನ್ನು ಈ ದಿಶೆಯಲ್ಲಿ ಗಮನಿಸಬಹುದು. ಈಗ ಪಠ್ಯಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ಮುಗ್ಧ ಮಕ್ಕಳ ಮನಸ್ಸುಗಳ ಮೇಲೆ ಕೋಮುವಾದ ಹೇರುವ ತಂತ್ರಗಳನ್ನು ಹೆಣೆದಿದೆ ಎಂದು ಬಸವರಾಜ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಾಡಿನ ಗಣ್ಯ ಸಾಹಿತಿಗಳು ಈ ಪರಿಷ್ಕರಣೆಯನ್ನು ತೀವ್ರವಾಗಿ ಪ್ರತಿರೋಧಿಸುತ್ತಿದ್ದಾರೆ. ಕವಿತೆ, ಪಠ್ಯಗಳಿಗೆ ತಮ್ಮ ಲೇಖನಗಳನ್ನು ಒದಗಿಸಿದ್ದ ಲೇಖಕರು ತಮ್ಮ ಕೊಡುಗೆಗಳನ್ನು ವಾಪಾಸ್ಸು ಪಡೆದಿದ್ದಾರೆ. ಇಷ್ಟಾದರೂ ಪಠ್ಯಪುಸ್ತಕ ಮರು ಪರಿಷ್ಕರಣೆ ಸಮಿತಿ ಕೈಗೊಂಡ ತಪ್ಪುಗಳನ್ನು ವಾಪಾಸ್ಸು ಪಡೆಯದಿರುವುದು ನಾಚಿಕೆಗೇಡಿನ ವಿಚಾರವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಶಾಂತಿಯುತವಾಗಿ ಪ್ರತಿಭಟನೆ ನಿರತರನ್ನು ಅವಾಚ್ಯವಾಗಿ ನಿಂದಿಸುವುದನ್ನು ಮತ್ತು ದಾರಿತಪ್ಪಿಸಿ ಹೊಸ ವಿಷಯಗಳ ಕಡೆ ಗಮನ ಸೆಳೆಯುವ ಕುತಂತ್ರವನ್ನು ಸಿಪಿಎಂ ಖಂಡಿಸುತ್ತದೆ. ಕೂಡಲೇ ಪರಿಷ್ಕೃತ ಪಠ್ಯಕ್ರಮವನ್ನು ವಾಪಾಸ್ಸು ಪಡೆದು ಹಳೆಯ ಪಠ್ಯ ಕ್ರಮವನ್ನು ಮುಂದುವರೆಸಲು ಮತ್ತು ರಾಷ್ಟ್ರ ಕವಿ ಕುವೆಂಪು ಅವರನ್ನು ನಿಂದಿಸಿದವರ ನೇತೃತ್ವದಲ್ಲಿರುವ ಪಠ್ಯಪುಸ್ತಕ ಮರು ಪರಿಷ್ಕರಣ ಸಮಿತಿಯನ್ನು ರದ್ದುಪಡಿಸುವಂತೆ ಅವರು ಒತ್ತಾಯಿಸಿದ್ದಾರೆ.

ಎರಡು ದಿನಗಳ ಕಾಲ ಮಂಗಳೂರಿನಲ್ಲಿ ನಡೆದ ಮುಸ್ಲಿಮ್ ಅಲ್ಪಸಂಖ್ಯಾತರ ಹಕ್ಕುಗಳ ವಿಷಯದಲ್ಲಿ ಸಂಘಟಿಸಲಾಗಿದ್ದ ಸಿಪಿಎಂ ರಾಜ್ಯ ಸಮಾವೇಶವು ರಾಜ್ಯದಾದ್ಯಂತ ಅಲ್ಪಸಂಖ್ಯಾತರ ಮತ್ತು ಮುಸ್ಲಿಮ್ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ರಾಜ್ಯದಾದ್ಯಂತ ವ್ಯಾಪಕವಾಗಿ ಪ್ರಚಾರಾಂದೋಲನವನ್ನು ಮತ್ತು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆಯನ್ನು ಮುಂಬರುವ ಫೆಬ್ರವರಿಯಲ್ಲಿ ಸಂಘಟಿಸಲು ನಿರ್ಧರಿಸಿದೆ ಎಂದು ಬಸವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News